ವಿಧಾನ ಪರಿಷತ್: ಸಚಿವರೊಬ್ಬರ ಲೈಂಗಿಕ ಹಗರಣದ ಸಿಡಿ ಹಾಗೂ ಇದೇ ವಿಚಾರವಾಗಿ ನ್ಯಾಯಾಲದ ಮೆಟ್ಟಿಲೇರಿರುವವರು ರಾಜೀನಾಮೆ ನೀಡಬೇಕು, ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಸಿಡಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಈ ವಿಚಾರವನ್ನು ಇಂದಿನ ಕಾರ್ಯಕಲಾಪ ಪಟ್ಟಿಯಲ್ಲಿ ಸೇರಿಸಲಾಗಿದೆ. ವಿಷಯದ ಅವಧಿ ಬಂದಾಗ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಈಗ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇದಕ್ಕೆ ಒಪ್ಪದ ಕಾಂಗ್ರೆಸ್ ಸದಸ್ಯರು, ಇದು ಸಾರ್ವಜನಿಕ ಮಹತ್ವದ ವಿಷಯವಾಗಿರುವುದರಿಂದ ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದರು. ಸದನದ ಬಾವಿಗೆ ಇಳಿದು, ಬಿಜೆಪಿ, ರಾಜ್ಯ ಸರ್ಕಾರ ಹಾಗೂ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಪ್ರತಿಪಕ್ಷದ ಸಭಾ ನಾಯಕ ಎಸ್. ಆರ್.ಪಾಟೀಲ್ ಮಾತನಾಡಿ, ನೀತಿ, ನಿಯಮ ಇಲ್ಲದ ಹೇಸಿಗೆ ಮತ್ತು ನಿರ್ಲಜ್ಜ ಸರ್ಕಾರ ಇದಾಗಿದೆ. ರಾಜ್ಯದ 6.50 ಕೋಟಿ ಜನರಿಗೆ ನೆಮ್ಮದಿ ಕಲ್ಪಿಸುವ ನಿಟ್ಟಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಆರು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಸದಸ್ಯರು ಕೂಡ ಕಾಂಗ್ರೆಸ್ ಪಕ್ಷ ಮತ್ತು ಮಹಾ ನಾಯಕ ಎಂಬುದನ್ನು ಉಲ್ಲೇಖಿಸಿ ಘೋಷಣೆ ಕೂಗಲು ಆರಂಭಿಸಿದರು.
ಆಗ ಸಭಾಪತಿ ಬಸವರಾಜ ಹೊರಟ್ಟಿಯವರು ಕಲಾಪವನ್ನು 10 ನಿಮಿಷ ಮುಂದೂಡಿದರು.