ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಅವರ ಸಿ.ಡಿ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಪ್ರಕರಣದ ಲಿಖೀತ ಸಾರಾಂಶ ಹಾಗೂ ಇತರ ಪೂರಕ ಮಾಹಿತಿಗಳನ್ನು ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಎರಡು ವಾರಗಳ ಅಂತಿಮ ಗಡುವು ನೀಡಿದೆ.
ಎಸ್‌ಐಟಿ ರಚನೆ ಪ್ರಶ್ನಿಸಿ ಸಂತ್ರಸ್ತ ಯುವತಿ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ಲಿಖೀತ ಸಾರಾಂಶಗಳನ್ನು ಒದಗಿಸುವುದಾಗಿ ಸರಕಾರ ಹಾಗೂ ಎಸ್‌ಐಟಿ ಹೇಳಿತ್ತು. ಇದೇ ವಿಚಾರವಾಗಿ ಅನೇಕ ಬಾರಿ ಸಮಯ ಕೇಳಲಾಗಿದೆ. ಆದರೂ ಈವರೆಗೆ ಒದಗಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಆಗ ಸರಕಾರದ ಪರ ವಕೀಲರು ಮತ್ತೆ ಕಾಲಾವಕಾಶ ಕೋರಿದರು. ಅದಕ್ಕೆ, ಈ ವಿಚಾರವಾಗಿ ಸಾಕಷ್ಟು ಬಾರಿ ಕಾಲಾವಕಾಶ ನೀಡಲಾಗಿದೆ. ಇದೇ ಕಾರಣಕ್ಕೆ ಅನೇಕ ಸಾರಿ ಪ್ರಕರಣದ ವಿಚಾರಣೆ ಮುಂದೂಡಲಾಗಿದೆ. ಈಗ ಮತ್ತೆ ಕಾಲಾವಕಾಶ ನೀಡುವುದಿಲ್ಲ. ಎರಡು ವಾರಗಳಲ್ಲಿ ಲಿಖೀತ ಸಾರಾಂಶ ಸಲ್ಲಿಸಬೇಕು. ಇದರ ಜತೆಗೆ ಪೂರಕ ಮಾಹಿತಿ ಇದ್ದರೆ ಅದನ್ನು ಒದಗಿಸಬಹುದು. ಇನ್ನೊಂದು ಬಾರಿ ಪ್ರಕರಣ ಮುಂದೂಡುವುದಿಲ್ಲ. ಇದು ಕೊನೆಯ ಮುಂದೂಡಿಕೆ ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿತು.