Advertisement

ಬೆಂಗಳೂರು: ಜಾರಕಿಹೊಳಿ ಸಿ.ಡಿ. ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಯುವತಿ ಸಹಿತ 5 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಪೈಕಿ ನಾಲ್ವರು ಟಿ.ವಿ. ಮಾಧ್ಯಮ ಸಿಬಂದಿಯಾಗಿದ್ದು, ಯುವತಿ ರಾಮನಗರದವರು. ಈಕೆ ಸಂತ್ರಸ್ತೆಯ ವಾಸ್ತವ್ಯಕ್ಕೆ ನೆರವು ನೀಡಿದ್ದರು ಎಂದು ಪೊಲೀಸ್‌ ಮೂಲಗಳು ಹೇಳಿವೆ.

Advertisement

ಯಶವಂತಪುರದಲ್ಲಿ ಟಿವಿ ಸಿಬಂದಿ, ಈತನ ಸ್ನೇಹಿತೆ ರಾಮನಗರದ ಯುವತಿ, ಚಿಕ್ಕಮಗಳೂರಿನಲ್ಲಿರುವ ಓರ್ವ ಟಿವಿ ಸಿಬಂದಿ, ವಿಜಯಪುರ ಮತ್ತು ಚಾಮರಾಜಪೇಟೆಯ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಪ್ರಕರಣದಲ್ಲಿ ಒಟ್ಟು 9 ಮಂದಿ ಶಾಮೀಲಾಗಿದ್ದಾರೆ, ಇನ್ನುಳಿದ ನಾಲ್ವರ ಸುಳಿವು ಸಿಕ್ಕಿದ್ದು, ಸದ್ಯವೇ ವಶಕ್ಕೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ವಿಜಯನಗರದ ಒಬ್ಬ ಟಿವಿ ಸಿಬಂದಿ ಶುಕ್ರವಾರ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಯಶವಂತಪುರದ ಬಳಿ ಆತನನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಈತನೇ ದಿನೇಶ್‌ ಕಲ್ಲಹಳ್ಳಿಗೆ ಸಿಡಿ ಕೊಟ್ಟಿದ್ದ ಎನ್ನಲಾಗುತ್ತಿದೆ. ಈತ ನೀಡಿದ ಸುಳಿವಿನ ಮೇರೆಗೆ ರಾಮನಗರದ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಈಕೆ ಮತ್ತು ಸಿಡಿಯಲ್ಲಿದ್ದ ಸಂತ್ರಸ್ತೆ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಈಕೆ ಸರಕಾರಿ ನೌಕರೆ ಎಂದು ತಿಳಿದು ಬಂದಿದೆ. ಬಳಿಕ ಚಾಮರಾಜಪೇಟೆಯ ಸೈಬರ್‌ ಪರಿಣತ ಯುವಕನೊಬ್ಬನನ್ನು ಬಲೆಗೆ ಬೀಳಿಸಿದ ಎಸ್‌ಐಟಿ, ಆತನಿಂದ ಹಲವು ಮಾಹಿತಿ ಕಲೆ ಹಾಕಿದೆ.

ಮತ್ತೂಬ್ಬ ಟಿವಿ ಸಿಬಂದಿಯನ್ನು ಚಿಕ್ಕಮಗಳೂರಿನ ಆಲ್ದೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಈತ ವೆಬ್‌ ಸೀರಿಸ್‌ ಒಂದನ್ನು ಮಾಡುತ್ತಿದ್ದು, ಪ್ರಕರಣದಲ್ಲಿ ಇತರ ಆರೋಪಿಗಳಿಗೆ ಸಹಕರಿಸಿದ್ದ. ಈ ಸಿಡಿ ತಯಾರಿಸಿದ್ದ ಯುವಕನನ್ನು ವಿಜಯಪುರದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತರಲಾಗಿದೆ.

ಎಫ್‌ಐಆರ್‌ ಯಾವಾಗ?
ಪ್ರಕರಣ ಸಂಬಂಧ ಇದುವರೆಗೂ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ. ಎಸ್‌ಐಟಿ ಐವರನ್ನು ವಶಕ್ಕೆ ಪಡೆದಿದೆ. ಐವರ ವಿಚಾರಣೆ ಆಧರಿಸಿ ಸೂಕ್ಷ್ಮ ಪ್ರಕರಣ ಎಂದು ಪರಿಗಣಿಸಿ ಸೈಬರ್‌ ಠಾಣೆಯಲ್ಲಿ ಸುಮೋಟೋ ದಾಖಲಿಸಿಕೊಳ್ಳಬಹುದು. ಇಲ್ಲವಾದಲ್ಲಿ ಸಂತ್ರಸ್ತೆಯನ್ನು ಪತ್ತೆ ಹಚ್ಚಿ ಆಕೆಯಿಂದ ದೂರು ಪಡೆಯಬಹುದು. ಅಥವಾ ಮಾಜಿ ಸಚಿವರ ಮೂಲಕ ದೂರು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಹೈಕಮಾಂಡ್‌ ಅಂಗಳಕ್ಕೆ ಪ್ರಕರಣ ಸಂಬಂಧ ವರದಿ ಸಲ್ಲಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ದಿಲ್ಲಿಗೆ ತೆರಳಿದ್ದಾರೆ.

Advertisement

ಎಸ್‌ಐಟಿ ತಂಡದಲ್ಲಿ ಯಾರ್ಯಾರು?
ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಸಿಸಿಬಿ ಕಮಿಷನರ್‌ ಸಂದೀಪ್‌ ಪಾಟೀಲ್‌, ಕೇಂದ್ರ ವಿಭಾಗ ಡಿಸಿಪಿ ಎಂ.ಎನ್‌.ಅನುಚೇತ್‌, ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್‌, ಎಸಿಪಿ ಧರ್ಮೇಂದ್ರ, ಕಬ್ಬನ್‌ ಪಾರ್ಕ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ.ಮಾರುತಿ ಮತ್ತು ಡಿ.ಎಂ.ಪ್ರಶಾಂತ್‌ ಬಾಬು ಹಾಗೂ ಸಿಬಂದಿ ತಂಡದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next