ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಯಾವುದೇ ವಿಷಯ ಪ್ರಸ್ತಾಪ ಮಾಡಲು ಸರ್ವ ಸ್ವತಂತ್ರರಿದ್ದಾರೆ. ಅವರು ಸಿಡಿ ಬಗ್ಗೆ ಚರ್ಚೆ ಮಾಡಿದರೂ ಸ್ವಾಗತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕರು ಯಾವುದೇ ವಿಷಯದ ಮೇಲೆ ಸರಿಯಾದ ರೀತಿಯಲ್ಲಿ ಬೆಳಕು ಚೆಲ್ಲಿದರೆ ಅವರ ಸಲಹೆ ಮೇಲೆ ನಾವು ನಮ್ಮ ಸಚಿವರನ್ನು ಬಿಗಿಗೊಳಿಸಲು ಅನುಕೂವಾಗುತ್ತದೆ. ವಿರೋಧ ಪಕ್ಷದ ನಾಯಕರು ಯಾವುದೇ ವಿಷಯ ಪ್ರಸ್ತಾಪ ಮಾಡುವುದು ಅಪರಾಧವಲ್ಲ. ಅವರು ಏನು ಸಲಹೆ ಕೊಡುತ್ತಾರೊ ಅದನ್ನು ನಾನು ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.
ಇನ್ನು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಮಾತನಾಡಿದ್ದೇನೆ. ಮತ್ತೆ ಅವರೊಂದಿಗೆ ಈ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ ಎಂದು ಹೇಳಿದರು.
ಸದನದಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿರಲು ಹಾಗೂ ಜನರ ಸಮಸ್ಯೆ ಆಲಿಸುವ ಕುರಿತು ಸಚಿವರ ಜೊತೆ ಸಭೆ ಮಾಡುತ್ತಿದ್ದೇನೆ.
– ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ.