ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದ್ದಾರೆ ಎನ್ನಲಾದ ಅಶ್ಲೀಲ ಸಿ.ಡಿ. ಪ್ರಕರಣ ವಿಧಾನಸಭೆಯಲ್ಲಿ ಸೋಮವಾರ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಭಾರೀ ವಾಗ್ವಾದಕ್ಕೆ ಕಾರಣವಾಯಿತು. ಸುಮಾರು 4 ತಾಸುಗಳ ಕಾಲ ಚರ್ಚೆ ನಡೆದು, ಸರಕಾರದ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಆರು ಮಂದಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಿ.ಡಿ. ಪ್ರಕರಣದ ಕುರಿತು ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಆರು ಜನ ಸಚಿವರು ರಾಜೀನಾಮೆ ನೀಡಬೇಕೆಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಎಸ್‌ಐಟಿಯು ಪ್ರಕರಣದ ತನಿಖೆ ನಡೆಸುತ್ತಿದ್ದು, ತನಿಖೆಯ ಅನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರಿಸಿದರು. ಇದರಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮಾಡಿದರು. ಕೊನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.
ಈ ಪ್ರಕರಣದಲ್ಲಿ ಯುವತಿ ತನಗೆ ಜೀವ ಭಯವಿದೆ, ರಮೇಶ್ ಜಾರಕಿಹೊಳಿ ತನ್ನನ್ನು ಬಳಸಿಕೊಂಡಿದ್ದಾರೆ ಎಂದು ವೀಡಿಯೋ ಮಾಡಿ, ರಕ್ಷಣೆ ಕೋರಿದ್ದಾಳೆ. ಇದು ವರೆಗೆ ಪೊಲೀಸರು ಅವಳನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿಲ್ಲ. ಯುವತಿಯ ಹೇಳಿಕೆ ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾ ಚಾರ ಪ್ರಕರಣ ದಾಖಲಿಸಬೇಕು. ಇದರಲ್ಲಿ ರಾಜ್ಯ ಪೊಲೀಸ್ ವಿಫಲವಾಗಿದೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ
ನಾವು ಕೋರ್ಟ್‌ಗೆ ಹೋಗಿರುವುದು “ಅನ್ ವೆರಿಫೈಡ್ ವೀಡಿಯೋ’ ಇದ್ದರೆ ಅದನ್ನು ಪ್ರಸಾರ ಮಾಡಬಾರದು ಎಂಬುದಕ್ಕಾಗಿ. ಸಮ್ಮಿಶ್ರ ಸರಕಾರ ಬೀಳಿಸಿದ 17 ಮಂದಿಯ ವಿರುದ್ಧ ಪಿತೂರಿ ನಡೆಯು ತ್ತಿದೆ. ಕಾನೂನಿನಲ್ಲಿ ಇರುವ ಅವಕಾಶ ಬಳಸಿಕೊಂಡಿರುವುದು ಅಪರಾಧವೇ?
– ಸುಧಾಕರ್, ಸಚಿವ