ಗೋಕಾಕ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಂಗಳವಾರ ಮಧ್ಯರಾತ್ರಿವರೆಗೆ ಬೆಳಗಾವಿ ಗ್ರಾಮೀಣದಿಂದ ಹಿಂದೆ ಸರಿಯದಿದ್ದರೆ ಸಿಡಿ ಬಿಡ್ತಿನಿ, ಸಿಡಿ ಬಿಡ್ತಿನಿ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಚುನಾವಣೆ ಘೋಷಣೆ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೆ ನನಗೆ ಸಿಡಿ ಬಿಡುಗಡೆಯ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನೀನು ಬೆಳಗಾವಿ ಗ್ರಾಮೀಣದಿಂದ ಹಿಂದೆ ಸರಿಯದಿದ್ದರೆ ಸಿಡಿ ಬಿಡುತ್ತೇನೆ ಎಂದಿದ್ದಾನೆ. ನಾನು ಕೂಡ ಬಿಡು ಎಂದು ಹೇಳಿದ್ದೇನೆ. ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಅಪಾರ ವಿಶ್ವಾಸ ಹೊಂದಿದೆ. ಕೇಂದ್ರ ನಾಯಕರ ಪ್ರಚಾರದಿಂದ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದರು.
ಈ ಪ್ರಕರಣದಲ್ಲಿ ನೂರಾರು ಜನ ಸಿಲುಕಿದ್ದಾರೆ. ಯುವತಿ, ನರೇಶ ಮತ್ತು ಶ್ರವಣ ಹಾಗೂ ಡಿಕೆಶಿಯಿಂದ ಅನೇಕರ ಬಾಳು ಹಾಳಾಗಿದೆ. ಸಿಬಿಐಗೆ ನೀಡಿದರೆ ನಾನೊಬ್ಬನೇ ಅಲ್ಲ ನೂರಾರು ಜನ ಶಾಂತಿಯಿಂದ ಬಾಳ್ವೆ ಮಾಡುತ್ತಾರೆ. ನನ್ನ ಕುಟುಂಬ ಮತ್ತು ನನ್ನ ಕ್ಷೇತ್ರದ ಜನ ನನ್ನ ಬೆನ್ನಿಗಿದ್ದಾರೆ. ಹೀಗಾಗಿ ನಾನು ಯಾವುದೇ ಬ್ಲ್ಯಾಕ್‌ಮೇಲ್ ಗೆ ಹೆದರುವುದಿಲ್ಲ. ಡಿಕೆಶಿ ಈ ಮೊದಲು ಒಳ್ಳೆಯ ವ್ಯಕ್ತಿಯಾಗಿದ್ದ. ಈಗ ಏಕೆ ಸಿಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಗೊತ್ತಿಲ್ಲ. ವಿಷ ಕನ್ಯೆಯ ಸಹವಾಸದಿಂದ ಡಿಕೆಶಿ ಹೊರಬರಬೇಕು. ಬಿಜೆಪಿ ಸರ್ಕಾರದ ಮಂತ್ರಿ ಮಂಡಲ ರಚನೆ ಸಂದರ್ಭದಲ್ಲೂ ಬ್ಲ್ಯಾಕ್‌ಮೇಲ್ ಮಾಡುತ್ತಾನೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಲೇಬೇಕು ಎಂದು ಆಗ್ರಹಿಸುತ್ತೇನೆ.