ಪಡುಬಿದ್ರಿ: ಪಡುಬಿದ್ರಿ ಪೊಲೀಸ್ ಠಾಣಾ ಸರಹದ್ದಿನಲ್ಲಿನ್ನು ಕಳ್ಳ ಹೆಜ್ಜೆ ಗುರುತು ನಡೆಯಲಾರದು. ಹೆದ್ದಾರಿಯಲ್ಲಿನ ಅಕ್ರಮ ತಡೆಯುವ ನಿಟ್ಟಿನಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಪೊಲೀಸ್ ಚೆಕ್ ಪೋಸ್ಟ್ ಹಾಗೂ ಪಡುಬಿದ್ರಿ ಜಂಕ್ಷನ್‌ನಲ್ಲಿ ಸಿಸಿ ಕೆಮರಾಗಳನ್ನು ಅಳವಡಿಸಿ ಪೊಲೀಸ್ ಇಲಾಖೆ ಕಣ್ಗಾವಲಾರಂಭಿಸಿದೆ.
ಪಡುಬಿದ್ರಿ ಜಂಕ್ಷನ್‌ನಲ್ಲಿ 5 ಹಾಗೂ ಹೆಜಮಾಡಿಯಲ್ಲಿ 3 ಕೆಮರಾ ಅಳವಡಿಸಲಾಗಿದೆ. ಅಪಘಾತ ಅಥವಾ ಬೇರೆಡೆ ಅಕ್ರಮ ಚಟುವಟಿಕೆ ನಡೆಸಿ ಪರಾರಿಯಾಗುವಂತಹ ವಾಹನಗಳನ್ನು ಗುರುತಿಸಲು ಇದು ಸಹಕಾರಿಯಾಗಲಿದೆ. ಅ ಮೂಲಕ ಠಾಣೆಯಲ್ಲಿಯೇ ಕುಳಿತು ನಿಗಾವಹಿಸಿ ಪೊಲೀಸರು ಜಾಗೃತರಾಗಿ ಕಾರ್ಯ ನಿರ್ವಹಿಸಲು ಅನುಕೂಲವೆನಿಸಿದೆ.
ಜನ ನಿಬಿಡ ಪಡುಬಿದ್ರಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ತ್ವರಿತವಾಗಿ ಸ್ಥಳಕ್ಕೆ ತೆರಳಿ ನಿಯಂತ್ರಿಸಲು, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ಮೇಲೆ ನಿಗಾ ವಹಿಸಲು ಪೊಲೀಸರಿಗೆ ಸಹಕಾರಿಯಾಗಲಿದೆ. ಕಳೆದ ಕೆಲ ವರ್ಷಗಳಿಂದ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದ ಪಡುಬಿದ್ರಿ ಪ್ರದೇಶದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದರು. ಕ್ಯಾಮರಾ ಅಳವಡಿಕೆಯಿಂದ ಕಾನೂನು ಸುವ್ಯವಸ್ಥೆಯ ಇನ್ನಷ್ಟು ಮುಂಜಾಗ್ರತಾ ಕ್ರಮಗಳಿಗೆ ಸಹಕಾರಿಯಾಗಿದೆ. ಕ್ಯಾಮರಾ ಅಳವಡಿಸಿರುವುದರಿಂದ ಮುಂದೊಂದು ದಿನ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರು ದಂಡ ತೆರುವ ಅನಿವಾರ್ಯತೆಯೂ ಎದುರಾಗಿದೆ. ಈಗಿಂದಲೇ ನಾಗರಿಕರು ಜಾಗೃತರಾಗಬೇಕಾಗಿದೆ.
ಸಂಚಾರದಟ್ಟಣೆ
ನಿಯಂತ್ರಣ ಸಾಧ್ಯ
ಈಗಾಗಲೇ ಮಿತಿಮೀರಿದ ವೇಗದ ಚಾಲನೆ, ಅಡ್ಡಾದಿಡ್ಡಿ ತಡೆರಹಿತ ಬಸ್ಸುಗಳ ನಿಲುಗಡೆಗೆ ಕಳೆದ ಎರಡು ಮೂರು ದಿನಗಳಿಂದ ಬಸ್ಸುಗಳ ವಿರುದ್ಧ ನೊಟೀಸು ನೀಡಿ ದಂಡದ ಮೊತ್ತವನ್ನು ಇಲಾಖೆಗೆ ಪಡೆಯಲಾಗಿದೆ. ಪ್ರಮುಖವಾಗಿ ಹೆದ್ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಹಾಗೂ ಜಾನುವಾರು ಸಾಗಾಟ ಮಾಡುವವರ ಮೇಲೆ, ಸರಗಳ್ಳರ, ಹಿಟ್ ಆ್ಯಂಡ್ ರನ್ ಪ್ರಕರಣ ವಿರುದ್ಧ ನಿಗಾ ಇರಿಸಲು ಮತ್ತು ಅಂತಹ ವಾಹನಗಳನ್ನು ಪತ್ತೆ ಹಚ್ಚಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಪೇಟೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ.
-ಸುಬ್ಬಣ್ಣ ಬಿ., ಪಡುಬಿದ್ರಿ ಠಾಣಾಧಿಕಾರಿ