ಜಾರ್ಖಂಡ್: ಬೆಳಗ್ಗೆ ರಸ್ತೆ ಸಮೀಪದಲ್ಲಿ ವಾಕಿಂಗ್ ನಲ್ಲಿದ್ದ ಜಾರ್ಖಂಡ್ ನ ಜಿಲ್ಲಾ ಮತ್ತು ಹೆಚ್ಚುವರಿ ಜಡ್ಜ್ ಉತ್ತಮ್ ಆನಂದ್ ಅವರಿಗೆ ಹಿಂದಿನಿಂದ ಬಂದ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುಧವಾರ(ಜುಲೈ 28) ಧನ್ಬಾದ್ ನಲ್ಲಿ ನಡೆದಿತ್ತು. ಆದರೆ ಇದೊಂದು ಆಕಸ್ಮಿಕ ಘಟನೆಯಲ್ಲ, ಇದು ಉದ್ದೇಶಪೂರ್ವಕವಾದ ಕೊಲೆ ಪ್ರಕರಣದಂತೆ ಕಂಡು ಬರುತ್ತಿದೆ ಎಂದು ಸುಪ್ರೀಂಕೋರ್ಟ್ ಗುರುವಾರ (ಜುಲೈ29) ತಿಳಿಸಿದೆ.
ಇದನ್ನೂ ಓದಿ:‘ಸ್ನೇಹವೆ ಶ್ರೇಷ್ಠ’ : ಮುನಿಸು ಮರೆತು ಮತ್ತೆ ಒಂದಾದ ರಕ್ಷಿತಾ-ದರ್ಶನ್
ಜಾರ್ಖಂಡ್ ಜಡ್ಜ್ ಸಾವಿನ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಸಿಜೆಐ ಎನ್.ವಿ.ರಮಣ ಅವರು ಜಾರ್ಖಂಡ್ ಹೈಕೋರ್ಟ್ ಗೆ ಮಾಹಿತಿ ನೀಡಿದ್ದು, ನಮಗೆ ಘಟನೆ ಬಗ್ಗೆ ತಿಳಿದಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋರಿಕ್ಷಾ ಚಾಲಕ ಹಾಗೂ ಆತನ ಜತೆಗಿದ್ದ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ. ಜಡ್ಜ್ ಉತ್ತಮ್ ಆನಂದ್ ಅವರು ಧನ್ಬಾದ್ ನ ತಮ್ಮ ಮನೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿರುವಾಗ ಈ ಘಟನೆ ಸಂಭವಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರ ನೀಡಿದ್ದಾರೆ.
ಆನ್ ಲೈನ್ ನಲ್ಲಿ ಹರಿದಾಡುತ್ತಿರುವ ಸಿಸಿಟಿವಿ ಫೂಟೇಜ್ ನಲ್ಲಿ, ಮುಂಜಾನೆ 5ಗಂಟೆಗೆ ಜಡ್ಜ್ ಉತ್ತಮ್ ಆನಂದ್ ಅವರು ಜಾಗಿಂಗ್ ಹೋಗುತ್ತಿದ್ದಾಗ, ರಭಸದಲ್ಲಿ ಬಂದ ಆಟೋ ನೇರವಾಗಿ ಅವರಿಗೆ ಡಿಕ್ಕಿ ಹೊಡೆದು ಹೋಗಿದ್ದು, ಉತ್ತಮ್ ಅವರು ಕೆಳಕ್ಕೆ ಬಿದ್ದ ರಭಸದಲ್ಲಿ ಸಾವನ್ನಪ್ಪಿರುವ ದೃಶ್ಯ ಸೆರೆಯಾಗಿದೆ.
ರಸ್ತೆ ಸಮೀಪ ಜಡ್ಜ್ ಆನಂದ್ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂದು ವರದಿ ತಿಳಿಸಿದೆ.
7ಗಂಟೆಯಾದರೂ ಪತಿ ಮನೆಗೆ ಬಂದಿಲ್ಲ ಎಂದು ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೊನೆಗೆ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ನಂತರ ಆಸ್ಪತ್ರೆಗೆ ತೆರಳಿದ ಪೊಲೀಸರಿಗೆ ಜಡ್ಜ್ ಸಾವನ್ನಪ್ಪಿರುವುದು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ಜಡ್ಜ್ ಉತ್ತಮ್ ಆನಂದ್ ಅವರು ಇತ್ತೀಚೆಗಷ್ಟೇ ಇಬ್ಬರು ಗ್ಯಾಂಗ್ ಸ್ಟರ್ ಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಅವರ ಹತ್ಯೆಯ ಹಿಂದೆ ಧನ್ಬಾದ್ ನ ಮಾಫಿಯಾ ಕೈವಾಡ ಇದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.