Advertisement

ಅಡುಗೆ ಕೋಣೆಗೂ ಸಿಸಿಟಿವಿ; ಖಾಸಗಿ ವಸತಿ ಶಾಲೆಗಳ ಮೇಲೆ ಸರ್ಕಾರದ ಕಣ್ಣು

03:45 AM Mar 11, 2017 | |

ಬೆಂಗಳೂರು: ತುಮಕೂರಿನ ಖಾಸಗಿ ವಸತಿ ಶಾಲೆಯಲ್ಲಿ ಗುರುವಾರ ಸಂಭವಿಸಿದ ದುರಂತದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಖಾಸಗಿ ವಸತಿ ಶಾಲೆಗಳ ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಆಹಾರ ತಯಾರಿಕಾ ವಿಧಾನ ಹಾಗೂ ಗುಣಮಟ್ಟ ಕುರಿತು ಆರೋಗ್ಯ ಇಲಾಖೆಯಿಂದ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲು ತೀರ್ಮಾನಿಸಿದೆ.

Advertisement

ತುಮಕೂರು ವಸತಿ ಶಾಲೆಯಲ್ಲಿ ವಿಷಾಹಾರ ಸೇವಿಸಿ ಮೂವರು ಮಕ್ಕಳು ಮೃತಪಟ್ಟ  ಪ್ರಕರಣದ ಹಿನ್ನೆಲೆಯಲ್ಲಿ  ಈ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಸದ್ಯದಲ್ಲೇ  ಈ ಸಂಬಂಧ ಕಾನೂನು ರೂಪಿಸಲು ನಿರ್ಧರಿಸಿದೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ. ತುಮಕೂರು ವಸತಿ ಶಾಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಅಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ರಾಜ್ಯ ಸರ್ಕಾರದ ವಸತಿ ಶಾಲೆಗಳಲ್ಲಿ 6 ಲಕ್ಷ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದು, ಎಲ್ಲೆಡೆ ಗುಣಮಟ್ಟದ ಆಹಾರ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸರ್ಕಾರದ ವಸತಿ ಶಾಲೆಗಳ ಅಡುಗೆ ಕೋಣೆಗಳಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ವಾರ ಅಥವಾ ತಿಂಗಳಿಗೊಮ್ಮೆ ತಪಾಸಣೆ ನಡೆಸುವ ವ್ಯವಸ್ಥೆಯೂ ಇದೆ. ಇದನ್ನು ಖಾಸಗಿ ವಸತಿ ಶಾಲೆಗಳಿಗೂ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next