ಬೆಂಗಳೂರು: ರಿಯಲ್ ಎಸ್ಟೇಟ್ ದಂಧೆ, ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಕುಖ್ಯಾತ ರೌಡಿಶೀಟರ್ ಸೈಲೆಂಟ್ ಸುನೀಲ, ಒಂಟೆ ರೋಹಿತ್ ಸೇರಿದಂತೆ 7 ಮಂದಿಯ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಬುಧವಾರ ಬೆಳ್ಳಂ ಬೆಳಗ್ಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಬಿಸಿಮುಟ್ಟಿಸಿದ್ದಾರೆ.
ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಕೆ.ಆರ್‌ಪುರಂನ ನಾಗ ಅಲಿಯಾಸ್ ಬಾಕ್ಸರ್ ನಾಗನ ಬಳಿ ಪರವಾನಿಗೆ ಹೊಂದಿರುವ ಪಿಸ್ತೂಲ್ ಹಾಗೂ ಭರತ್ ಅಲಿಯಾಸ್ ಬಂಗಾರಿ ಮನೆಯಲ್ಲಿ ಏರ್‌ಗನ್, ಜಯಕುಮಾರ್ ನಿವಾಸದಲ್ಲಿ ಕೋಟ್ಯಾಂತರ ರೂ. ಮೌಲ್ಯದ 8 ಭೂ ದಾಖಲೆಗಳು, ವೇಡಿಯಪ್ಪ ಅಲಿಯಾಸ್ ಮಾರ್ಕೆಟ್ ವೇಡಿ ನಿವಾಸದಲ್ಲಿ ಹಲವರಿಗೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಭಾರೀ ಪ್ರಮಾಣದ ರಸೀದಿ ಪುಸ್ತಕಗಳನ್ನು ವಶಪಡಿಸಿಕೊಂಡ ಪೊಲೀಸರು ಮೀಟರ್ ಬಡ್ಡಿ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆ ವೇಳೆ ಸೈಲೆಂಟ್ ಸುನೀಲ್, ಒಂಟೆ ರೋಹಿತ್, ಮಾರ್ಕೆಟ್ ವೇಡಿ, ತೊದಲ ಮಂಜ ನಿವಾಸದಲ್ಲಿ ಇರಲಿಲ್ಲ. ಯಾವುದೇ ದಾಖಲೆಗಳು ಲಭ್ಯವಾಗಲಿಲ್ಲ. ಬಾಕ್ಸರ್ ನಾಗ ಹಾಗೂ ಜಯಕುಮಾರ್‌ನನ್ನು ವಿಚಾರಣೆಗೊಳಪಡಿಸಿ ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಗೊಳಗಾದ ಏಳು ಮಂದಿಯೂ ಅಪರಾಧ ಚಟುವಟಿಕೆಗಳ ಹಿನ್ನೆಲೆ ಹೊಂದಿದ್ದು, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್, ಭೂ ಮಾಫಿಯಾ ಚಟುವಟಿಕೆಗಳಲ್ಲಿ ತಮ್ಮ ಸಹಚರರನ್ನು ಇಟ್ಟುಕೊಂಡು ಸಕ್ರಿಯರಾಗಿದ್ದರು ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ, ಜಪ್ತಿಪಡಿಸಿಕೊಂಡಿರುವ ದಾಖಲೆಗಳು, ಶಸ್ತ್ರಾಸ್ತ್ರಗಳ ಅನ್ವಯ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
19 ಗುಂಡು ಬಳಕೆ!: 2011ರಲ್ಲಿ ಪರವಾನಿಗೆ ಹೊಂದಿರುವ ಪಿಸ್ತೂಲ್ ಪಡೆದಿರುವ ಬಾಕ್ಸರ್ ನಾಗ ಇತ್ತೀಚೆಗೆ ಪರವಾನಿಗೆ ನವೀಕರಣಗೊಳಿಸಿದ್ದಾನೆ. ಆತ ಪಡೆದುಕೊಂಡಿದ್ದ ಗುಂಡುಗಳ ಪೈಕಿ 19 ಗುಂಡುಗಳು ಬಳಕೆಯಾಗಿದ್ದು, ಅವುಗಳ ಬಗ್ಗೆ ಲೆಕ್ಕ ನೀಡಿಲ್ಲ. ಹೀಗಾಗಿ, ಯಾವ ಉದ್ದೇಶಕ್ಕೆ ಗುಂಡುಗಳನ್ನು ಬಳಕೆ ಮಾಡಿದ್ದಾನೆ. ಆತನ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತ ಅಲೋಕ್ ಕುಮಾರ್ ಹೇಳಿದರು.
ಹಣ ಸಂದಾಯ ಕೋಡ್‌ಗಳಲ್ಲಿ ದಾಖಲು!: ಮಾರ್ಕೆಟ್ ವೇಡಿ ಬಳಿ ಜಪ್ತಿ ಮಾಡಿಕೊಂಡಿರುವ ರಸೀದಿಗಳಲ್ಲಿ ಹಣ ನೀಡಿರುವ ಬಗ್ಗೆ, ಪಡೆದುಕೊಂಡಿರುವ ಬಗ್ಗೆ ಕೋಡ್ ಮಾದರಿಯಲ್ಲಿ ನಮೂದಿಸಲಾಗಿದೆ. ಈ ಕೋಡ್‌ಗಳನ್ನು ಡಿಕೋಡ್ ಮಾಡಿ ಯಾವ ರೀತಿಯ ವ್ಯವಹಾರ ನಡೆದಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಜತೆಗೆ, ಆರೋಪಿಗಳಿಂದ ಹಣ ಪಡೆದುಕೊಂಡಿರುವವರನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕಬೇಕಿದೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದರು.