ಬೆಂಗಳೂರು: ನಗರದಲ್ಲಿ ಮೀಟರ್ ಬಡ್ಡಿ ದಂಧೆ ಹಾವಳಿ ಹೆಚ್ಚಾಗಿದ್ದು, ದೀಪಾ ವಳಿ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ದಂಧೆಕೋರರ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಕೇಂದ್ರ ಅಪರಾಧ ಬ್ಯೂರ(ಸಿಸಿಬಿ)ದ ಆರ್ಥಿಕ ಅಪರಾಧ ವಿಭಾಗ, ಬೆಂಗಳೂರು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಲೇವಾದೇವಿ ನಿಬಂಧಕ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಚಾಮರಾಜಪೇಟೆ, ಬಸವನಗುಡಿ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರದ ನಾಲ್ಕು ಕಡೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಚಾಮರಾಜಪೇಟೆಯಲ್ಲಿ ವೆಂಕಟೇಶ್, ಬಸವೇಶ್ವರ ನಗರದಲ್ಲಿ ಮನೋಜ್, ಬಸವನಗುಡಿಯಲ್ಲಿ ನಿವೃತ್ತ ಎಎಸ್‌ಐ ಪುತ್ರ ಶೀಲಾ ಹಾಗೂ ಕಾಮಾಕ್ಷಿಪಾಳ್ಯದಲ್ಲಿ ರೌಡಿಶೀಟರ್ ಜಗದೀಶ್ ಅಲಿಯಾಸ್ ಟಾಮಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ 23.42 ಲಕ್ಷ ರೂ. ನಗದು, 7 ಲಕ್ಷ ರೂ. ಮೌಲ್ಯದ 127 ಗ್ರಾಂ ಚಿನ್ನಾಭರಣ, 9 ಲಕ್ಷ ರೂ. ಮೌಲ್ಯದ 10 ಕೆ.ಜಿ. 864 ಗ್ರಾಂ ಬೆಳ್ಳಿ ವಸ್ತುಗಳು, 109 ಚೆಕ್‌ಗಳು, 50 ಆನ್ ಡಿಮಾಂಡ್ ಪ್ರಾಮಿಸರಿ ನೋಟ್, 42 ಖಾಲಿ ಬಾಂಡ್ ಪೇಪರ್, 85 ಶುದ್ಧ ಕ್ರಿಯ ಪತ್ರಗಳು, 35 ಸಾಲ ನಮೂದಿಸಿರುವ ದಾಖಲಾತಿಗಳು, 11 ಇ-ಸ್ಟಾಂಪ್ ಪೇಪರ್‌ಗಳು, 45 ಪಾಕೇಟ್ ಪುಸ್ತಕಗಳು, 15 ಅಗ್ರಿಮೆಂಟ್ ಪ್ರತಿಗಳು, 3 ಲಕ್ಷ ರೂ. ಮೌಲ್ಯದ 6 ರೋಲೆಕ್ಸ್ ವಾಚ್‌ಗಳು ಸೇರಿ 42,42 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.
ಆರೋಪಿಗಳ ಪೈಕಿ ಮನೋಜ್ ಪರಾರಿಯಾಗಿದ್ದು, ಇತರೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಈ ಹಿಂದೆ ರೌಡಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ರೌಡಿ ಶೀಟರ್ ಜಗದೀಶ್ ಅಲಿಯಾಸ್ ಟಾಮಿ ಮನೆ ಮೇಲೆ ರೌಡಿ ನಿಗ್ರಹ ಪಡೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆಯೇ ಈತನ ವ್ಯವಹಾರಗಳು ಕಂಡು ಬಂದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ವಿಭಾಗಕ್ಕೆ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರೋಪಿಗಳು ಬಡವರು ಮತ್ತು ಮಧ್ಯಮ ವರ್ಗದವರಿಗೆ ಮೀಟರ್‌ಬಡ್ಡಿ ರೂಪದಲ್ಲಿ ಹಣ ನೀಡಿ ಸುಲಿಗೆ ಮಾಡುತ್ತಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಸಿಸಿಬಿ ಡಿಸಿಪಿ ಆರ್.ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ಆರ್ಥಿಕ ಅಪರಾಧ ವಿಭಾಗದ ಎಸಿಪಿ ಎಂ.ಎಚ್. ಮಂಜುನಾಥ ಚೌಧರಿ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.