ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಾದಕ ವಸ್ತು ಮಾರಾಟ, ಫೋನ್ ಬಳಕೆ ಸೇರಿ ಕೆಲ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ ದಿಢೀ ರನೇ ಜೈಲಿನ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಶನಿವಾರ ಬೆಳಗ್ಗೆ ಶ್ವಾನ ದಳ ಸಮೇತ ಸಿಸಿಬಿಯ 40ಕ್ಕೂ ಅಧಿಕ ಅಧಿಕಾರಿ-ಸಿಬ್ಬಂದಿ ಜೈಲಿನ ಮೇಲೆ ದಾಳಿ ನಡೆಸಿ, ಪ್ರತಿ ಬ್ಯಾರಕ್‌ಗಳು ತಪಾಸಣೆ ನಡೆಸಿದ್ದಾರೆ. ಆದರೆ, ಯಾವುದೇ ಮೊಬೈಲ್, ಮಾದಕ ವಸ್ತುಗಳು ಸೇರಿ ಇತರೆ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಕುಖ್ಯಾತ ರೌಡಿಗಳಾದ ಸುನೀಲ್, ವಿಲ್ಸನ್ ಗಾರ್ಡನ್ ನಾಗ ಸೇರಿ ಹಲವು ರೌಡಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೌಡಿಗಳು ಮೊಬೈಲ್ ಮೂಲಕ ಹೊರಗಡೆ ಸಂಪರ್ಕ ಸಾಧಿಸಿ ದುಷ್ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಮೊಬೈಲ್, ಮಾರಕಾಸ್ತ್ರ, ಮಾದಕ ಪದಾರ್ಥ ಸೇರಿ ಹಲವು ವಸ್ತುಗಳ ಪತ್ತೆಗೆ ಶೋಧ ನಡೆಸಿದರು. ಇತ್ತೀಚೆಗೆ ವಿಚಾರಣಾಧೀನ ಕೈದಿಯೊಬ್ಬ ಮನೆ ಊಟಕ್ಕೆ ಅವಕಾಶ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಕೀಲರೊಬ್ಬರು, “ಜೈಲುಗಳಲ್ಲಿ ಗನ್, ಮಾದಕ ವಸ್ತು ಸೇರಿ ಎಲ್ಲಾ ನಿಷೇಧಿತ ವಸ್ತುಗಳು ಸಿಗುತ್ತವೆ’ ಎಂದು ಆರೋಪಿಸಿದ್ದರು. ಈ ಬಗ್ಗೆ ಹೈಕೋರ್ಟ್ ಕೂಡ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು. ಈ ಬೆನ್ನಲ್ಲೆ ಕೆಲ ದೂರುಗಳ ಆಧರಿಸಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.
ದಾಳಿಯ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಪರಪ್ಪನ ಅಗ್ರಹಾರ ಜೈಲಿನ ವಿಐಪಿ ಬ್ಯಾರಕ್ ಸೇರಿ ಎಲ್ಲ ಬ್ಯಾರಕ್‌ಗಳನ್ನು ಸಂಪೂರ್ಣವಾಗಿ ಶೋಧಿಸಲಾಗಿದೆ. ಆದರೆ ಜೈಲಿನಲ್ಲಿ ಮೊಬೈಲ್ ಸೇರಿ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.