ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತಮ್ಮ ಬೇಟೆ ಮುಂದುವರಿಸಿದ್ದು, ಇಂದು ನಟಿ ಸಂಜನಾ ಗಲ್ರಾನಿ ಮನೆಗೆ ದಾಳಿ ಮಾಡಿದ್ದಾರೆ.
ಬೆಂಗಳೂರಿನ ಇಂದಿರಾನಗರದಲ್ಲಿರುವ ಸಂಜನಾ ಗಲ್ರಾನಿ ನಿವಾಸದ ಮೇಲೆ ಇಂದು ಬೆಳಗಿನ ಜಾವ ಇನ್ಸ್ ಪೆಕ್ಟರ್ ಪುನೀತ್ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು, ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ನಟಿ ರಾಗಿಣಿ ದ್ವಿವೇದಿ ಅವರ ಮನೆಗೆ ಇತ್ತೀಚೆಗೆ ದಾಳಿ ಮಾಡಿ ನಂತರ ಅವರನ್ನು ವಶಕ್ಕೆ ಪಡೆದಿತ್ತು. ನಂತರ ವಿಚಾರಣೆ ನಡೆಸಿ ರಾಗಿಣಿಯವರನ್ನು ಬಂಧಿಸಲಾಗಿತ್ತು.
ಈ ಹಿಂದೆ ಪ್ರಕರಣ ಸಂಬಂಧ ಸಿನಿ ವಿತರಕ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಪ್ರಕರಣದಲ್ಲಿ ಸಂಜನಾ ಕೂಡ ಭಾಗಿಯಾಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದರು. ಸಂಬರಗಿ ತಮ್ಮನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡುತ್ತಾರೆಂದು ಸಂಜನಾ ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಜನರ ಮೇಲೆ ಎಫ್ ಐಆರ್ ಆಗಿದೆ. ನಟಿ ರಾಗಿಣಿ ದ್ವಿವೇದಿ ಅವರನ್ನು ಎ2 ಎಂದು ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.