ಮಂಗಳೂರು: ಮಂಗಳೂರು ನಗರದಾದ್ಯಂತ ಮಾದಕ ವಸ್ತುವಾದ MDMA ನ್ನು ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ಗಳ ತಂಡದ ಇನ್ನೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ಧಾರೆ.
ಜು.20 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ಪಿಲಿಕೂರಿನಲ್ಲಿ 2 ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬಂದು ಅಕ್ರಮವಾಗಿ MDMA ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರಿಂದ 180 ಗ್ರಾಂ ಎಂಡಿಎಂಎ, ಎರಡು ಕಾರು, ಪಿಸ್ತೂಲ್, ಡ್ರಾಗನ್ ಚೂರಿ, ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಬುಧವಾರ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯದಲ್ಲಿದ್ದ ಸಿಸಿಬಿ ಪೊಲೀಸರು ಸಮಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ MDMA ಸಹಿತ ಅಬ್ದುಲ್ ಉವೇಸ್ ಎಂಬಾತನನ್ನು ಬಂಧಿಸಿದ್ದಾರೆ.
ಆತನ ವಶದಿಂದ ಒಟ್ಟು 8 ಗ್ರಾಂ ತೂಕದ ರೂ. 40,000/- ಮೌಲ್ಯದ ಎಂಡಿಎಂಎ ಮಾದಕ ವಸ್ತು, ಒಂದು ಮೊಬೈಲ್ ಫೋನ್, ನಗದು ರೂ. 1020/-, ಡಿಜಿಟಲ್ ತೂಕ ಮಾಪನ ಸೇರಿ ಒಟ್ಟು ರೂ 81,520/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿಡಲಾಗಿದೆ.
ಆರೋಪಿ ಅಬ್ದುಲ್ ಉವೇಸ್ ಎಂಬಾತನ ವಿರುದ್ಧ ಈ ಹಿಂದೆ ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕಿಡ್ನಾಫ್ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ/ ಸೇವನೆ ಪ್ರಕರಣ, ಉಡುಪಿ ಜಿಲ್ಲೆ ಸೆನ್ ಪೊಲೀಸ್ ಠಾಣೆಯಲ್ಲಿ ಐ ಟಿ ಅಕ್ಟ್ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಗಳ ಪೈಕಿ 2 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ 2 ವಾರಂಟ್ ಜಾರಿಯಲ್ಲಿದೆ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Udupi ವಿಡಿಯೋ ಚಿತ್ರೀಕರಣ ಕೇಸ್: ಉಡುಪಿಗೆ ಆಗಮಿಸಿದ ಖುಷ್ಬೂ ಸುಂದರ್