ಬೆಂಗಳೂರು: ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರ ಹಲವು ವರ್ಷಗಳ ಹೋರಾಟ ಇದೀಗ ಫಲ ಸಿಕ್ಕಿದ್ದು, ಚಾಮರಾಜಪೇಟೆಯ ರಾಯನ್ ಸರ್ಕಲ್‌ನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸಿಸಿಬಿ ಹಳೇ ಕಚೇರಿ ತಿಂಗಳಲ್ಲಿ ಶಾಂತಿನಗರದಲ್ಲಿರುವ ಬಿಎಂಟಿಸಿಯ ಟಿಟಿಎಂಸಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.
ಈ ಹಿಂದೆ ಗುಪ್ತಚರ ವಿಭಾಗ ಮತ್ತು ಆಂತರಿಕಾ ಭದ್ರತಾ ದಳ(ಐಎಸ್‌ಡಿ) ವಿಭಾಗ ಕಾರ್ಯನಿರ್ವ ಹಿಸುತ್ತಿದ್ದ ಟಿಟಿಎಂಸಿ ಮೂರು ಮಹಡಿಗಳನ್ನು ಸಿಸಿಬಿ ಕಚೇರಿಗೆ ಮೀಸಲಿಡಲಾಗಿದೆ. ಹೊಸ ಕಚೇರಿ ವಿನ್ಯಾಸ ನಡೆಯುತ್ತಿರುವುದರಿಂದ ತಿಂಗಳಲ್ಲಿ ಸಿಸಿಬಿ ಕಚೇರಿ ಸ್ಥಳಾಂತರಗೊಳ್ಳಲಿದೆ. ಇದರ ಬೆನ್ನಲ್ಲೇ ಕಚೇರಿ ಸ್ಥಳಾಂತಗೊಳ್ಳುವವರೆಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿ ಸ ಬಾರದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸಿಸಿಬಿ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಸಿಸಿಬಿ ಕಚೇರಿ ಸ್ಥಳಾಂತರಕ್ಕೆ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಲೇ ಇತ್ತು. ಈ ಹಿಂದೆ ಸಿಸಿಬಿ ಮುಖ್ಯಸ್ಥರಾಗಿದ್ದ ಹಲವು ಮಂದಿ ಐಪಿಎಸ್ ಅಧಿಕಾರಿಗಳು ನೂತನ ಕಟ್ಟಡಕ್ಕೆ ನಗರ ಪೊಲೀಸ್ ಆಯುಕ್ತರ ಮುಂದೆ ಬೇಡಿಕೆ ಇಡುತ್ತಿದ್ದರು. ಜತೆಗೆ ಸರ್ಕಾರಕ್ಕೂ ಮನವಿ ಮಾಡಲಾಗುತ್ತಿತ್ತು. ಆದರೆ, ಸರ್ಕಾರ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಮಧ್ಯೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಇತ್ತೀಚೆಗೆ ಪರಿವೀಕ್ಷಣೆ ನಿಮಿತ್ತ ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದರು. ಆಗ ಕಟ್ಟಡದ ಶಿಥಿಲಾವಸ್ಥೆ, ಸ್ವತ್ಛತೆ ಇಲ್ಲದನ್ನು ನೋಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆಗ ಸಿಸಿಬಿಗೆ ಹೊಸ ಕಟ್ಟಡದ ನಿರ್ಮಾಣ ವಿಚಾರವನ್ನು ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಆದರೆ, ಈ ಮಾತಿಗೆ ಆಯುಕ್ತರು, ಮೊದಲು ಹಳೆ ಕಟ್ಟಡ ತೆರವುಗೊಳಿಸಿ ಆಮೇಲೆ ಹೊಸ ಕಟ್ಟಡದ ಪ್ರಸ್ತಾಪ ಮಾಡುವಂತೆ ಹೇಳಿದ್ದರು. ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಕಚೇರಿ ಸ್ಥಳಾಂತರಕ್ಕೆ ಅಧಿಕಾರಿಗಳು, ಮೊದಲು ವಿಜಯನಗರದ ಬಿಎಸ್‌ಎನ್‌ಎಲ್ ಸೇರಿ ಕೆಲವು ಕಟ್ಟಡ ಪರಿಶೀಲಿಸಿದರು. ಅಂತಿಮವಾಗಿ ಗುಪ್ತದಳದ ಕಚೇರಿ ಸ್ಥಳಾಂತರ ಬಳಿಕ ಶಾಂತಿನಗರದ ಟಿಟಿಎಂಸಿಯಲ್ಲಿ ಖಾಲಿ ಇದ್ದ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.