ಬೆಂಗಳೂರು: ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ನೀಡಿರುವ ನೋಟಿಸ್ ಸಂಬಂಧ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಸ್ಪಷ್ಟೀಕರಣ ನೀಡಿ ಎಂದು ಬಿಟಿಎಂ ಲೇಔಟ್ ಪಾಲಿಕೆ ಸದಸ್ಯ ಕೆ. ದೇವದಾಸ್‌ಗೆ ಹೈಕೋರ್ಟ್ ಸೂಚಿಸಿದೆ.
ಸಿವಿಲ್ ಮೊಕದ್ದಮೆ ಕುರಿತು ವಿಚಾರಣೆಗೆ ಹಾಜರಾಗುವಂತೆ ಪತ್ನಿ ವಸಂತ ಹಾಗೂ ತನಗೆ ಸಿಸಿಬಿ ಎಸಿಪಿ ನೀಡಿದ್ದ ನೋಟಿಸ್ ರದ್ದತಿಗೆ ಕಾರ್ಪೊರೇಟರ್ ದೇವದಾಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾ. ವಿನೀತ್ ಕೊಠಾರಿ ಅವರಿದ್ದ ಪೀಠ ನಡೆಸಿತು.
ವಿಚಾರಣೆ ವೇಳೆ ದೇವದಾಸ್ ಪರ ವಕೀಲರು ವಾದಿಸಿ, ಸಿವಿಲ್ ಮೊಕದ್ದಮೆಗೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸುವ ಅಧಿಕಾರ ಪೊಲೀಸರಿಗಿಲ್ಲ. ಹೀಗಿದ್ದರೂ ಖಾಸಗಿ ವ್ಯಕ್ತಿ ನೀಡಿದ ದೂರು ಆಧರಿಸಿ ಸಿಸಿಬಿ ಎಸಿಪಿ ನೋಟಿಸ್ ನೀಡಿದ್ದಾರೆ. ವಾಸ್ತವ ದಲ್ಲಿ ಸಿಸಿಬಿಗೆ ಪೊಲೀಸ್ ಠಾಣೆ ಮಾನ್ಯತೆ ಹಾಗೂ ಎಫ್ಐಆರ್ ಹಾಕುವ ಅಧಿಕಾರವಿಲ್ಲವೆಂದು ವಾದಿಸಿದರು.ಇದನ್ನು ಆಕ್ಷೇಪಿಸಿದ ಸರ್ಕಾರ ಪರ ವಕೀಲರು, ಖಾಸಗಿ ವ್ಯಕ್ತಿ ಯೊಬ್ಬರು ಅರ್ಜಿದಾರರ ವಿರುದ್ಧ ನೀಡಿ ರುವ ದೂರು ಆಧರಿಸಿ ವಿಚಾರಣೆ ಪೊಲೀಸರ ಕರ್ತವ್ಯ. ಹೀಗಾಗಿ
ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸಾಕ್ಷಿಗಳಿ ದ್ದರೆ ಸ್ಪಷ್ಟಪಡಿಸಲಿ ಎಂದರು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ನೀವು ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ, ನಿಮ್ಮ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರ ಎಂಬ ಬಗ್ಗೆ ವಿಶ್ವಾಸವಿದ್ದರೆ, ಅಲ್ಲಿಯೇ ದಾಖಲೆಗಳನ್ನು ಸ್ಪಷ್ಟಪಡಿಸಿ, ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಮೌಖೀಕ ಸೂಚನೆ ನೀಡಿ, ಅರ್ಜಿ ವಜಾಗೊಳಿಸಿತು.
ಜಮೀನು ಮಾರಾಟಕ್ಕೆ ಸಂಬಂಧಿಸಿದ ಸಿವಿಲ್ ವ್ಯಾಜ್ಯದಲ್ಲಿ ದೇವದಾಸ್, ಪತ್ನಿ ವಸಂತಾ ಅವರಿಂದ ವಂಚನೆಯಾಗಿದ್ದು, ಅಕ್ರಮ ಆಸ್ತಿಗಳಿಸಿದ್ದು ತನಿಖೆ ನಡೆಸುವಂತೆ ಕೋರಿ ಎಂ. ಶಾಂತಾರಾಜು ಎಂಬುವವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.