ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿಗೆ ಸುಪಾರಿ ನೀಡಿದ ಪ್ರಕರಣದ ತನಿಖೆ ಮುಗಿಸಿರುವ ಸಿಸಿಬಿ ಪೊಲೀಸರು, 2ನೇ ಎಸಿಎಂಎಂ ನ್ಯಾಯಾಲಯಕ್ಕೆ 500 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಿ ಮೊದಲ ಆರೋಪಿಯಾಗಿದ್ದು, ಹಿರಿಯ ಪತ್ರಕರ್ತ ರವಿ ಬೆಳಗೆರೆ ಎರಡನೇ ಆರೋಪಿಯಾಗಿದ್ದಾರೆ. ಸುನೀಲ್ ಹೆಗ್ಗರವಳ್ಳಿಯು ರವಿಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ಜತೆ ಸಲುಗೆಯಿಂದ ಇದ್ದರು. ಹೀಗಾಗಿ ಶಶಿಧರ್ ಮುಂಡೇವಾಡಿಯನ್ನು ತಮ್ಮ ಕಚೇರಿಗೆ ಕರೆಸಿಕೊಂಡ ರವಿ ಬೆಳಗೆರೆ ಒಮ್ಮೆ ಐದು ಸಾವಿರ ಮತ್ತು ಮತ್ತೂಮ್ಮೆ 10 ಸಾವಿರ ರೂ ಹಣ ನೀಡಿ ಸುಪಾರಿ ಕೊಟ್ಟಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಸಿಸಿಬಿ ಉಲ್ಲೇಖೀಸಿದೆ.
ಡಿ.9ರಂದು ವಿಚಾರಣೆ ಸಂದರ್ಭದಲ್ಲಿ ಪತ್ರಕರ್ತ ರವಿ ಬೆಳಗೆರೆ ಹೇಳಿಕೆ ನೀಡಿದ್ದು, “ಸುನೀಲ್ 15 ವರ್ಷಗಳಿಂದ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ. 2013ರಲ್ಲಿ ನಮ್ಮ ಪತ್ರಿಕೆಯ ಎಂಡಿಯಾಗಿ ಎರಡನೇ ಪತ್ನಿ ಯಶೋಮತಿ ಅವರನ್ನು ನೇಮಿಸಿದ್ದೆ. ಈ ವೇಳೆ ನನ್ನ ಪತ್ನಿ ಜತೆ ಸಲುಗೆಯಿಂದ ಇದ್ದ ಸುನೀಲ್ ಹೆಗ್ಗರವಳ್ಳಿ ಆಕೆಯೊಂದಿಗೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂಬ ಅನುಮಾನ ನನಗೆ ಇತ್ತು. ಹೀಗಾಗಿ 2-3 ವರ್ಷಗಳ ಹಿಂದೆಯೇ ನಾಲ್ಕೈದು ಯುವಕರ ಮೂಲಕ ಹೆಗ್ಗರವಳ್ಳಿಗೆ ಎಚ್ಚರಿಕೆ ನೀಡಿದ್ದೆ.’
“ಈ ವಿಷಯ ತಿಳಿದು ಬೇರೆಡೆ ಕೆಲಸಕ್ಕೆ ಸೇರಿದ ಸುನೀಲ್, ನಂತರವೂ ಪತ್ನಿಯೊಂದಿಗೆ ಫೋನ್ ಸಂಪರ್ಕದಲ್ಲಿದ್ದ. ಇಬ್ಬರೂ. ಫೋನ್‌ನಲ್ಲಿ ಮಾತನಾಡುವುದು ನನ್ನ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಮುಗಿಸಲು ತೀರ್ಮಾನಿಸಿದೆ. ಕೋರಿಯರ್ ಯುವಕನ ಮೂಲಕ ವಸಂತಪುರದಲ್ಲಿದ್ದ ಹೆಗ್ಗರವಳ್ಳಿ ಮನೆ ವಿಳಾಸ ತಿಳಿದುಕೊಂಡೆ. ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಶಶಿಧರ್ ಮುಂಡೇವಾಡಿ ಸೂಕ್ತ ಎಂದು ತೀರ್ಮಾನಿಸಿದೆ.
ಮುಂಡೇವಾಡಿಗೆ ಕರೆ ಮಾಡಿ ಮುಖ್ಯವಾದ ವಿಚಾರ ಮಾತನಾಡಬೇಕೆಂದು ಕರೆಸಿಕೊಂಡೆ ಪದ್ಮನಾಭನಗರದ ಹಾಯ್ ಬೆಂಗಳೂರು ಕಚೇರಿಗೆ ಬಂದಿದ್ದ ಮುಂಡೇವಾಡಿಗೆ ಈ ವೇಳೆ ಸುನೀಲ್ ಹೆಗ್ಗರವಳ್ಳಿ ಮತ್ತು ಯಶೋಮತಿ ಸಂಬಂಧದ ಬಗ್ಗೆ ಹೇಳಿದ್ದೆ. ಶಶಿಧರ್ ಮುಂಡೇವಾಡಿ ಜತೆ ಮಾತನಾಡಿ ಸುಫಾರಿ ಕೊಟ್ಟೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಸಿಸಿಬಿ ದೋಷಾರೋಪ ಪಟ್ಟಿಯಲ್ಲಿ ವಿವರಿಸಿದೆ.