ಗದಗ: ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯ ಸರಕಾರ ಪಾರದರ್ಶಕ ಆಡಳಿತ ನೀಡುತ್ತಿದೆ.
ಜನಪರವಾದ ಆಡಳಿತದ ಕಾರ್ಯಸಾಧನೆಯಿಂದ ಹತಾಶರಾಗಿ ಕಾಂಗ್ರೆಸ್ ನಾಯಕರು ಬಿಟ್ ಕಾಯಿನ್ ಹೆಸರಿನಲ್ಲಿ ವಿನಾಕಾರಣ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸಲು
ಹವಣಿಸುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ವಿವಾದ ಸೃಷ್ಟಿಸಿ, ಅದರಿಂದ ರಾಜಕೀಯ ದುರ್ಲಾಭ ಪಡೆಯಲು ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ. ಇದೇ ಬಿಟ್ ಕಾಯಿನ್ ಕಾಂಗ್ರೆಸ್ ಮುಖಂಡರಿಗೆ ತಿರುಗುಬಾಣವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ. ಬಿಜೆಪಿ ನಾಯಕರೇ ತಮಗೆ ಬಿಟ್-ಕಾಯಿನ್ ಹಗರಣದ ಮಾಹಿತಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರ ಹೇಳಿಕೆ ನೀಡಿದ್ದು, ತನಿಖೆಯ ಹಾದಿ ತಪ್ಪಿಸಲು ಮತ್ತು ಬಿಜೆಪಿಯಲ್ಲಿ ಹುಳಿಹಿಂಡಿ ಒಡಕು ಸೃಷ್ಟಿಸಲು ಹವಣಿಸಿರುವುದು ಸ್ಪಷ್ಟವಾಗಿದೆ.
ಆದರೆ, ಇಂತಹ ಹುನ್ನಾರಗಳ ಆಟ ನಡೆಯುವುದಿಲ್ಲ, ಬಿಜೆಪಿ ಆಂತರಿಕವಾಗಿ ಒಕ್ಕಟ್ಟು ಗಟ್ಟಿಯಾಗಿದೆ. ಕಾಂಗ್ರೆಸ್ಸಿನಂತೆ ಮನೆಯೊಂದು ಹಲವು ಬಾಗಿಲು ಎಂಬ ಪರಿಸ್ಥಿತಿ ನಮ್ಮಲ್ಲಿಲ್ಲ ಎಂದು ಸಚಿವ ಸಿ.ಸಿ.ಪಾಟೀಲ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : 30 ಅಡಿ ಪ್ರಪಾತಕ್ಕೆ ಉರುಳಿದ ಗ್ಯಾಸ್ ಟ್ಯಾಂಕರ್ : ಪವಾಡಸದೃಶ ರೀತಿಯಲ್ಲಿ ಪಾರಾದ ಚಾಲಕ