Advertisement

ಸರ್ಕಾರಿ ಪ್ರೌಢಶಾಲೆಯಲ್ಲಿ ಸಿಸಿ ಕ್ಯಾಮೆರಾ ನಿಗಾ!

06:00 AM Sep 04, 2018 | Team Udayavani |

ಬೆಂಗಳೂರು : ರಾಜ್ಯದ 3,333 ಸರ್ಕಾರಿ ಪ್ರೌಢಶಾಲೆಗಳ ಭದ್ರತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಆದೇಶವೂ ಹೊರಬಿದ್ದಿದೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.

Advertisement

ಇವುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಆರಂಭವಾಗಿರುವ 175 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗ‌ಳು ಸೇರಿವೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಈಗಾಗಲೇ ಸಿಸಿ ಟಿವಿ ಕ್ಯಾಮೆರಾ ಅನುಷ್ಠಾನವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸಿಸಿ ಟಿವಿ  ಕ್ಯಾಮೆರಾ ಈವರೆಗೂ ಇರಲಿಲ್ಲ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಸಿಸಿ ಟಿವಿ ತಾತ್ಕಾಲಿಕವಾಗಿ ಅವಳಡಿಕೆಯಾಗುತಿತ್ತು. ಈಗ ಶಾಶ್ವತವಾಗಿ ಅಳವಡಿಸಲು ಕ್ರಿಯಾಯೋಜನೆ ಸಿದ್ಧವಾಗಿದೆ.

ವಿದ್ಯಾರ್ಥಿಗಳ ಸುರಕ್ಷೆ, ಶಾಲಾ ಪರಿಕರಗಳ ಮೇಲೆ ಕಣ್ಗಾವಲು ಹಾಗೂ ಶಿಕ್ಷಕರ ಪಾಠ-ಪ್ರವನದ ಮೇಲೆ ನಿಗಾ ಇಡುವ ಸದುದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗಳು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

3,333 ಸರ್ಕಾರಿ ಪ್ರೌಢಶಾಲೆಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಬೇಕಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಒಪ್ಪಿಗೆಯೂ ಸಿಕ್ಕಿದೆ. 10 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಅನುದಾನ ಬಿಡುಗಡೆಯಾದ ಕೂಡಲೇ ಸಿಸಿ ಟಿವಿ ಕ್ಯಾಮೆರಾ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಸ್ಥಳೀಯವಾಗಿ ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಈ ಕಾರ್ಯಕ್ಕೆ ಅನುದಾನ ನೀಡಿದರೂ ಅದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಿಸಿ ಟಿವಿ ಕ್ಯಾಮೆರಾ ಖರೀದಿಗೆ ಜಿಲ್ಲಾ ಹಂತದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ. ಜಿಲ್ಲಾ ಉಪನಿರ್ದೇಶಕರು(ಡಿಡಿಪಿಐ), ಕ್ಷೇತ್ರಶಿಕ್ಷಣಾಧಿಕಾರಿಗಳು(ಬಿಇಒ) ನೀಡಿರುವ ಮಾಹಿತಿಯ ಆಧಾರದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಯ ಎಲ್ಲ ತಾಲೂಕಿನ ಗರಿಷ್ಠ ಮಕ್ಕಳಿರುವ ಪ್ರೌಢಶಾಲೆಗಳನ್ನು ಈ ಯೋಜನೆಗೆ ಆಯ್ದುಕೊಳ್ಳಲಾಗಿದೆ. ಆಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಖರೀದಿ ಪ್ರಕ್ರಿಯೆ ಆರಂಭವಾಗಲಿದ್ದು, 2018ರ ಡಿಸೆಂಬರ್‌ ಅಂತ್ಯದೊಳಗೆ 3333 ಶಾಲೆಗಳಲ್ಲಿ ಸಿಸಿ  ಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಗುರಿ ಶಿಕ್ಷಣ ಇಲಾಖೆ ಹೊಂದಿದೆ.

Advertisement

ಶಾಲೆಯಲ್ಲೇ ನಿರ್ವಹಣೆ :
ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಆಯ್ಕೆಯಾಗಿರುವ  ಪ್ರತಿ ಶಾಲೆಗಳು 4 ಸಿಸಿ ಟಿವಿ ಕ್ಯಾಮೆರಾ ಮತ್ತು ಅದರ ಪರಿವೀಕ್ಷಣೆಗೆ ಸಿಸ್ಟಮ್‌ ಮತ್ತು ದೃಶ್ಯಾವಳಿಗಳ ದತ್ತಾಂಶ ಕ್ರೋಢಿಕರಣಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಸಿಸಿ ಟಿವಿ ಕ್ಯಾಮೆರಾದ ಸಂಪೂರ್ಣ ನಿರ್ವಹಣೆ ಶಾಲೆಯ ಮುಖ್ಯಶಿಕ್ಷಕರು ಸಹಿತವಾಗಿ ಸಹ ಶಿಕ್ಷಕರೇ ಮಾಡಬೇಕು. ನಿತ್ಯದ ನಿರ್ವಹಣೆ ಯಾರು ಮಾಡಬೇಕೆಂಬುದು ಶಾಲಾ ಹಂತದಲ್ಲಿ ನಿರ್ಧಾರವಾಗಲಿದೆ. ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಾದ ಒಂದು ವರ್ಷ ಸಂಬಂಧಪಟ್ಟ ಸಂಸ್ಥೆಯಿಂದ ನಿರ್ವಹಣೆ ನಡೆಯುತ್ತದೆ.

ಎಲ್ಲೆಲ್ಲಿ ಸಿಸಿ ಟಿವಿ ಕ್ಯಾಮೆರಾ
ಶಾಲಾ ಮುಖ್ಯದ್ವಾರ, ಮುಖ್ಯಶಿಕ್ಷಕರು ಸಹಿತವಾಗಿರುವ ಶಿಕ್ಷಕರ ಕೊಠಡಿ ಮತ್ತು ಮೈದಾನ ಹಾಗೂ ಶಾಲೆಯ ಅತಿ ಸೂಕ್ಷ್ಮ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಇರುವ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಭದ್ರತೆ ಇದರ ಮೂಲ ಉದ್ದೇಶವಾದರೂ, ಶಾಲಾ ಪರಿಕರಗಳನ್ನು ಸುಭದ್ರವಾಗಿಸಲು ಸಹಕಾರಿಯಾಗಲಿದೆ.

ಪತ್ತೆ ಹಚ್ಚಲು ಸಹಕಾರಿ!
ಶಾಲಾವರಣದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೂ ಆರೋಪಿಗಳನ್ನು ಪತ್ತೆ ಹಚ್ಚಲು ಸಿಸಿ ಟಿವಿ ಕ್ಯಾಮೆರಾ ಸಹಕಾರಿಯಾಗಲಿದೆ. ಅಲ್ಲದೆ ಶಿಕ್ಷಕರ ಸಮಯ ಪಾಲನೆ, ತರಗತಿಗಳ ನಿರ್ವಹಣೆ ಮತ್ತು ಮೊಬೈಲ್‌ ನಿಷೇಧ ಸೇರಿದಂತೆ ಇತರೆ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುತ್ತಿರುವ ಬಗ್ಗೆಯೂ ಮೇಲ್ವಿಚಾರಣೆಗೆ ಸಿಸಿ ಟಿವಿ ಕ್ಯಾಮೆರಾ ಅನುಕೂಲವಾಗಲಿದೆ.

ಮಕ್ಕಳ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಇದಕ್ಕೆ ಸರ್ಕಾರದ ಆದೇಶವೂ ಆಗಿದೆ. ಅತಿ ಶೀಘ್ರದಲ್ಲಿ ಅನುಷ್ಠಾನ ಕಾರ್ಯ ನಡೆಯಲಿದೆ.
– ಡಾ.ಪಿ.ಸಿ.ಜಾಫ‌ರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next