Advertisement

ಕೆರೆಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು: ಕೆರೆ ಪರಿಸರ ಸಂರಕ್ಷಣೆಗೆ 5 ಕೋಟಿ ರೂ ವೆಚ್ಚದ ಯೋಜನೆ

02:53 PM May 26, 2022 | Team Udayavani |

ಬೆಂಗಳೂರು: ಕೆರೆ ಆವರಣದಲ್ಲಿ ಅನೈತಿಕ ಚಟುವಟಿಕೆ, ತ್ಯಾಜ್ಯ ಎಸೆಯುವುದಕ್ಕೆ ನಿಯಂತ್ರಣ ಹೇರಲು ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ.

Advertisement

ಕೆರೆಗಳ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಕೆರೆ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಬಿಡಿಎ, ಬಿಬಿಎಂಪಿ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿವೆ. ಅದರಲ್ಲಿ ಬಿಬಿಎಂಪಿ ನಿರ್ವಹಣೆಯಲ್ಲಿ 202 ಕೆರೆಗಳಿವೆ. ಆ ಪೈಕಿ 79 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ 35 ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹೀಗೆ ಅಭಿವೃದ್ಧಿ ಮಾಡಲಾಗುತ್ತಿರುವ ಕೆರೆಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯದಂತೆ ತಡೆಯಲು ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಲಾಗುತ್ತಿದೆ. ಮೊದಲ ಹಂತರದಲ್ಲಿ 12 ಕೆರೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ನಂತರದ ದಿನಗಳಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಉಳಿದ ಕೆರೆಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ.

ಶುಭ್ರ ಬೆಂಗಳೂರು ಅಡಿ ಕಾರ್ಯಗತ

ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಶುಭ್ರ ಬೆಂಗಳೂರು ಕಾರ್ಯಕ್ರಮದ ಅಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಅದಕ್ಕಾಗಿ 5 ಕೋಟಿ ರೂ. ವ್ಯಯಿಸಲಾಗುತ್ತಿದೆ. 2 ಕೋಟಿ ರೂ. ಸಿಸಿ ಕ್ಯಾಮೆರಾ ಇನ್ನಿತರ ಪರಿಕರಗಳಿಗೆ ವ್ಯಯಿಸುತ್ತಿದ್ದರೆ, ಉಳಿದ ಹಣವನ್ನು ಕ್ಯಾಮೆರಾ ನಿರ್ವಹಣೆಗೆ ಅಗತ್ಯವಿರುವ ಕಂಟ್ರೋಲ್‌ ರೂಂ ನಿರ್ಮಾಣಕ್ಕೆ ಬಳಸಲಾಗುತ್ತದೆ.

Advertisement

ನೆಟ್‌ವರ್ಕ್‌ ಇಲ್ಲದಿದ್ದರೆ ಅಲಾರಾಂ

ಸಿಸಿ ಕ್ಯಾಮೆರಾ ಅಳವಡಿಸಿದ ನಂತರ ದಿನದ 24 ಗಂಟೆಯೂ ವಿಡಿಯೋ ರೆಕಾರ್ಡ್‌ ಮಾಡಲಾಗುತ್ತದೆ. ಆ ವಿಡಿಯೋ ಲೈವ್‌ ಆಗಿ ಕಂಟ್ರೋಲ್‌ ರೂಂಗೆ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಅಂತರ್ಜಾಲದ ಮೂಲಕ ಈ ಕೆಲಸ ಮಾಡಲಾಗುತ್ತದೆ. ಒಂದು ವೇಳೆ ನೆಟ್‌ವರ್ಕ್‌ ಸಮಸ್ಯೆ ಉಂಟಾದರೆ ಅದನ್ನು ಈಮೇಲ್‌ ಮೂಲಕ ಸಂಬಂಧಪಟ್ಟವರಿಗೆ ತಿಳಿಸಬೇಕಿದೆ. ಜತೆಗೆ ಕಂಟ್ರೋಲ್‌ ರೂಂನಲ್ಲಿನ ಅಲಾರಾಂ ಬಾರಿಸುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ಚೀನಾ ಮೇಡ್‌ ಬೇಡ

ಸಿಸಿ ಕ್ಯಾಮೆರಾ ಪೂರೈಕೆ, ಅಳವಡಿಕೆ ಮತ್ತು ಕಂಟ್ರೋಲ್‌ ರೂಂ ನಿರ್ವಹಣೆಗಾಗಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಸಿಸಿ ಕ್ಯಾಮೆರಾ ಪೂರೈಕೆ ಟೆಂಡರ್‌ ಪಡೆಯುವ ಸಂಸ್ಥೆಯು ಚೀನಾದಲ್ಲಿ ತಯಾರಿಸಲಾದ ಅಥವಾ ಚೀನಾ ಮೂಲದ ಸಂಸ್ಥೆ ಪೂರೈಸುವ ಕ್ಯಾಮೆರಾ ಅಳವಡಿಸದಂತೆ ಷರತ್ತು ವಿಧಿಸಲಾಗುತ್ತಿದೆ. ಕ್ಯಾಮೆರಾ ಅಷ್ಟೇ ಅಲ್ಲದೆ ಸರ್ವರ್‌, ಸ್ಟೋರೇಜ್‌ ಪರಿಕರಗಳು ಚೀನಾಕ್ಕೆ ಸಂಬಂಧಿಸಿದ್ದಾಗಿರಬಾರದು ಎಂದು ತಿಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಶಯದ ಆತ್ಮನಿರ್ಭರ ಅಭಿಯಾನಕ್ಕೆ ಒತ್ತು ನೀಡಲು ಭಾರತ ಮೂಲದ, ಭಾರತದಲ್ಲಿ ತಯಾರಾದ ಕ್ಯಾಮೆರಾ ಸೇರಿ ಇನ್ನಿತರ ಪರಿಕರಗಳನ್ನು ಪೂರೈಸಬೇಕು ಎಂದು ಹೇಳಲಾಗಿದೆ.

-ಗಿರೀಶ್‌ ಗರಗ

Advertisement

Udayavani is now on Telegram. Click here to join our channel and stay updated with the latest news.

Next