Advertisement

ಖಾಸಗಿ ಸಿಟಿ ಬಸ್‌ಗಳಿಗೂ ಬೇಕಿದೆ ಸಿಸಿ ಕೆಮರಾ ಕಣ್ಗಾವಲು

12:52 PM Jul 31, 2018 | Team Udayavani |

ಮಹಾನಗರ: ಸರ್‌… ನಗರದಲ್ಲಿ ಓಡಾಡುವ ಅನೇಕ ಖಾಸಗಿ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್‌ ನೀಡುವುದಿಲ್ಲ. ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುತ್ತಾರೆ. ಇದು ಗೊತ್ತಿದ್ದರೂ, ನಿರ್ವಾಹಕರು ಚಕಾರ ಎತ್ತುವುದಿಲ್ಲ’ ಎಂದು ಟ್ರಾಫಿಕ್‌ ಪೊಲೀಸ್‌, ಸಾರಿಗೆ ಇಲಾಖೆಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಸಿಟಿ ಬಸ್‌ ಮಾಲಕರ ಸಂಘ ಈಗ ಚಿಂತಿಸಿದೆ.
ಖಾಸಗಿ ಸಿಟಿ ಬಸ್‌ಗಳಲ್ಲಿ ನಡೆಯುವ ಅಕ್ರಮ ಗಳಿಗೆ ಕಡಿವಾಣ ಹಾಕುವ ಸಲುವಾಗಿ ಬಸ್‌ಗಳಲ್ಲಿ ಸಿಸಿ ಕೆಮರಾ ಕಣ್ಗಾವಲನ್ನಿಡಬೇಕು ಎಂದು ಪ್ರಯಾಣಿಕರ ಒತ್ತಾಯ ಈಗ ಜೋರಾಗಿ ಕೇಳಿಬರುತ್ತಿದೆ. 

Advertisement

ನಗರದಲ್ಲಿ ಒಟ್ಟು 360 ಖಾಸಗಿ ಸಿಟಿ ಬಸ್‌ಗಳಿವೆ. ಸ್ಟೇಟ್‌ಬ್ಯಾಂಕ್‌ನಿಂದ ಕೊನೆಯ ಬಸ್‌ ಸುಮಾರು 10.20ಕ್ಕೆ ಹೊರಡುತ್ತದೆ. ರಾತ್ರಿ ಹತ್ತು ಗಂಟೆ ಬಳಿಕವೂ ನಗರದ ಸ್ಟೇಟ್‌ಬ್ಯಾಂಕ್‌ನಿಂದ ಪಾವೂರು, ತಲಪಾಡಿ ಸಹಿತ ಇನ್ನಿತರ ಪ್ರದೇಶಗಳಿಗೆ ಸಿಟಿ ಬಸ್‌ ತೆರಳುತ್ತಿವೆ. ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಕಂಪೆನಿ, ಮಾಲ್‌ಗ‌ಳಲ್ಲಿ ದುಡಿಯುವ ಮಹಿಳೆಯರು ರಾತ್ರಿ 9 ಗಂಟೆ ಅನಂತರವೂ ಸಿಟಿ ಬಸ್‌ಗಳಲ್ಲಿ  ಸಂಚರಿಸುತ್ತಾರೆ. ಅವರ ಭದ್ರತೆ ಕೂಡ ಸಂಘದ ಮುಖ್ಯ ಉದ್ದೇಶಗಳ‌ಲ್ಲೊಂದು. ಪ್ರತೀ ಬಸ್‌ ದಿನದಲ್ಲಿ ಸರಾಸರಿ 8 ಟ್ರಿಪ್‌ ಓಡುತ್ತವೆ. ಈ ದೃಷ್ಟಿಯಿಂದ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಆವಶ್ಯಕತೆ ಇದೆ ಎನ್ನುತ್ತಾರೆ ಪ್ರಯಾಣಿಕರು.

ಕಡಿಮೆಯಾಗುತ್ತಿಲ್ಲ  ಪ್ರಕರಣ
ಖಾಸಗಿ ಸಿಟಿ ಬಸ್‌ಗಳಲ್ಲಿ ಹಣ ಕೊಟ್ಟರೂ, ಟಿಕೆಟ್‌ ನೀಡುತ್ತಿಲ್ಲ ಎಂಬ ದೂರು ಹೊಸದಲ್ಲ. ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮ ಗಳಲ್ಲಿಯೂ ಹತ್ತಾರು ಕರೆಗಳು ಬಂದಿದ್ದವು.  ಈ ಬಗ್ಗೆ “ಸುದಿನ’ ಕೂಡ ವಿಸ್ತೃತ ವಿಶೇಷ ವರದಿ ಪ್ರಕಟಿಸಿತ್ತು. ಕೆಲವು ದಿನಗಳ ಹಿಂದೆ ಟ್ರಾಫಿಕ್‌ ಪೊಲೀಸರು ಮತ್ತು ಸಾರಿಗೆ ಇಲಾಖೆ ಕೆಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗಿತ್ತು. ಆದರೂ ಮತ್ತದೇ ಅಕ್ರಮಗಳು ಮುಂದುವರಿಯುತ್ತಿವೆ. 
ರಾತ್ರಿ ವೇಳೆ ಬಸ್‌ಗಳಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಒಂದು ವೇಳೆ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಿದರೆ ಇದನ್ನು ಕೊಂಚ ಮಟ್ಟಿಗಾದರೂ ತಡೆಯಲು ಸಾಧ್ಯವಾದೀತು.

 ಇಲ್ಲಿಯೂ ಅಗತ್ಯ
ಬೆಂಗಳೂರಿನಲ್ಲಿನ ಹೆಚ್ಚಿನ ಬಿಎಂಟಿಸಿ ಸಿಟಿ ಬಸ್‌ಗಳಲ್ಲಿ  ಸಿಸಿ ಕೆಮರಾ ಅಳವಡಿಸಲಾಗಿದೆ. ಇದರಿಂದ ಅಪಘಾತ ಪ್ರಮಾಣ, ಚಾಲಕ- ನಿರ್ವಾಹಕನ ನಿರ್ಲಕ್ಷ್ಯ ಕಡಿಮೆಯಾಗಿದೆ. ಜತೆಗೆ ಪ್ರಯಾಣಿಕರ ಜತೆ ನಿರ್ವಾಹಕರ ನಡವಳಿಕೆ ಕೂಡ ಸುಧಾರಿಸಿದೆ. ಈ ನಿಟ್ಟಿನಲ್ಲಿ ನಗರದಲ್ಲೂ  ಸಿಟಿ ಬಸ್‌ಗಳಿಗೂ ಹಂತ ಹಂತವಾಗಿ ಸಿಸಿ ಕೆಮರಾ ಅಳವಡಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

 ಪರಿಶೀಲಿಸಿ ಕ್ರಮ
ಖಾಸಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾಗಳಲ್ಲಿ ಅಳವಡಿಸುವ ನಿರ್ಧಾರ ಒಳ್ಳೆಯದು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಮಾಲಕರ ಸಂಘದ ಮುಂದಿನ ಸಭೆಯಲ್ಲಿ ಪ್ರಸ್ತಾವಿಸಿ, ಹಂತ ಹತವಾಗಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಪರಿಶೀಲನೆ ನಡೆಸುತ್ತೇವೆ.
 - ಅಜೀಜ್‌ ಪರ್ತಿಪಾಡಿ,
ಅಧ್ಯಕ್ಷ, ಖಾಸಗಿ ಸಿಟಿ ಬಸ್‌ ಮಾಲಕರ ಸಂಘ

Advertisement

  ಸುರಕ್ಷತೆ ಅಗತ್ಯ
ಸುರಕ್ಷತೆಯ ದೃಷ್ಟಿಯಿಂದ ನಗರದ ಖಾಸಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಏಕೆಂದರೆ ಕೆಲವು ಬಾರಿ ನಿರ್ವಾಹಕರು ಪ್ರಯಾಣಿಕರ ಜತೆ ಸಂಯಮದಿಂದ ವರ್ತಿಸುವುದಿಲ್ಲ. ಅಲ್ಲದೆ, ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದಲೂ ಅಳವಡಿಸುವುದು ಒಳ್ಳೆಯದು.
 - ನಿಶಾಂತ್‌ ರೈ, ಪ್ರಯಾಣಿಕ

 *ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next