Advertisement

ದಲಿತರ ಕಾಲನಿಗೆ ಸಿಸಿ ಕೆಮರಾ: ಪಾಲಿಕೆಗೆ ಪ್ರಸ್ತಾವನೆ

01:20 PM Mar 28, 2022 | Team Udayavani |

ಸ್ಟೇಟ್‌ಬ್ಯಾಂಕ್‌: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ದಲಿತರ ಸುಮಾರು 50 ಕಾಲನಿಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಮಹಾನಗರ ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಂಗಳೂರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್‌ ತಿಳಿಸಿದ್ದಾರೆ.

Advertisement

ಪೊಲೀಸ್‌ ಆಯುಕ್ತರ ಕಚೇರಿ ಸಭಾಂಗಣದಲ್ಲಿ ರವಿವಾರ ಜರಗಿದ ಎಸ್‌ಸಿ, ಎಸ್‌ಟಿ ಸಮುದಾಯದವರ ಕುಂದು ಕೊರತೆ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಲಿತ ಮುಂದಾಳು ಎಸ್‌ಪಿ ಆನಂದ್‌ ಮಾತನಾಡಿ, ದಲಿತರ ಕಾಲನಿಯಲ್ಲಿ ಡ್ರಗ್ಸ್‌ ಸೇವನೆ ಮತ್ತಿತರ ಅಪರಾಧ ಚಟುವಟಿಕೆಗಳು ನಡೆಯುತ್ತಿದೆ. ಇದರಲ್ಲಿ ಹೊರಗಿನವರೇ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಇದನ್ನು ಪತ್ತೆ ಹಚ್ಚಲು ಸಿಸಿ ಕೆಮರಾ ಅಗತ್ಯ. ಈ ಹಿಂದೆಯೂ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹರಿರಾಂ ಶಂಕರ್‌ “ಈಗಾಗಲೇ 50 ಕಾಲನಿಗಳಿಗೆ ಸಿಸಿ ಕೆಮರಾ ಅಳವಡಿಸಲು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ತುರ್ತಾಗಿ ಯಾವ ಕಾಲನಿಗಳಿಗೆ ಅಳವಡಿಸಬೇಕು ಎಂಬುದನ್ನು ಕೂಡ ತಿಳಿಸಲಾಗಿದೆ’ ಎಂದರು.

ಕರ್ತವ್ಯ ವೇಳೆ ಮೊಬೈಲ್‌ ಬಳಕೆ ಸಂಚಾರ ಪೊಲೀಸರು ಕರ್ತವ್ಯದ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಾ ನೆರಳಿನಲ್ಲಿ ನಿಂತಿರುವುದು ವಿವಿಧೆಡೆ ಕಂಡುಬರುತ್ತಿದೆ. ನಿಗದಿತ ಸ್ಥಳವನ್ನು ಬಿಟ್ಟು ಎಲ್ಲೋ ದೂರದಲ್ಲಿ ನಿಂತು ಕರ್ತವ್ಯ ನಿರ್ಲಕ್ಷಿಸುತ್ತಿದ್ದಾರೆ. ಶಾಲಾ ಮಕ್ಕಳು ರಸ್ತೆ ದಾಟುವ ವೇಳೆ ಕೂಡ ಕೆಲವೆಡೆ ಪೊಲೀಸರು ಅಲರ್ಟ್‌ ಆಗಿರುವುದಿಲ್ಲ ಎಂದು ಕೆಲವು ಮಂದಿ ಸಭೆಯಲ್ಲಿ ದೂರಿದರು.

ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಡಿಸಿಪಿಯವರು ಎಸಿಪಿ ಎಂ.ಎ. ನಟರಾಜ್‌ ಅವರಿಗೆ ಸೂಚಿಸಿದರು. ನಿಷೇಧಿತ ಶಬ್ದಗಳನ್ನು ಪರಿಶೀಲಿಸಿ ದಲಿತ ಸಮುದಾಯಕ್ಕೆ ಸಂಬಂಧಿಸಿದ ಕೆಲವು ಜಾತಿ ಸೂಚಕ ಪದಗಳನ್ನು ಬಳಕೆ ಮಾಡುವ ಬಗ್ಗೆ ದಲಿತ ಮುಂದಾಳುಗಳಲ್ಲೇ ವಾಗ್ವಾದ ನಡೆಯಿತು. ಈ ಸಂದರ್ಭ ಮಾತನಾಡಿದ ಡಿಸಿಪಿ ಅವರು, ಯಾವ ಪದಗಳನ್ನು ಬಳಸಬಾರದು ಎಂಬ ಬಗ್ಗೆ ಸರಕಾರ, ನ್ಯಾಯಾಲಯದ ಆದೇಶಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಮಾತ್ರವಲ್ಲದೆ ಇತರ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡುತ್ತಿದ್ದೇವೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಡಿಸಿಪಿ ಸಲಹೆ ನೀಡಿದರು.

ಅಪರಾಧ, ಸಂಚಾರ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು. ದಿನಕರ್‌ ಮುಚ್ಚಾರು, ಜಗದೀಶ್‌ ಪಾಂಡೇಶ್ವರ, ಅಚ್ಯುತ, ರಘುವೀರ್‌, ದುರ್ಗಾಪ್ರಸಾದ್‌, ಅನಿಲ್‌, ಸುನಿಲ್‌, ಅಮಲ ಜ್ಯೋತಿ ಮೊದಲಾದವರು ಅಹವಾಲುಗಳನ್ನು ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next