ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಹಿನ್ನೆಲೆ ಸಿಬಿಎಸ್ ಇ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.
ಇಂದು (ಏಪ್ರಿಲ್ 14) ತಜ್ಞರ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಸಭೆಯ ಬಳಿಕ ಮಾತಾಡಿರುವ ಪ್ರಧಾನಿ ಮೋದಿ, ಸಿಬಿಎಸ್ ಇ 10ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಿದ್ದು, 12ನೇ ತರಗತಿಯ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಶಿಕ್ಷಣ ಸಚಿವ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮೇ 4 ರಿಂದ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಆರಂಭವಾಗಲಿದ್ದವು. ಆದರೆ, ಇಂದು ಸಭೆಯಲ್ಲಿ ಚರ್ಚಿಸಿದ ಬಳಿಕ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸುವ ನಿರ್ಣಯ ಕೈಗೊಳ್ಳಲಾಯಿತು. ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಜೂನ್ 1 ರ ನಂತರ ನೂತನ ವೇಳಾಪಟ್ಟಿ ಪ್ರಕಟಿಸುವುದಾಗಿ ತಿಳಿಸಿದೆ.
ಇನ್ನು ದೇಶದಾದ್ಯಂತ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪರೀಕ್ಷೆಗಳನ್ನು ರದ್ದುಪಡಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ, ಚಿತ್ರನಟ ಸೋನು ಸೂದ್ ಸೇರಿದಂತೆ ಹಲವು ಸರ್ಕಾರಕ್ಕೆ ಒತ್ತಾಯಿಸಿದ್ದರು. ಹೀಗಾಗಿ, ಇಂದು ಸಭೆ ನಡೆಯಿತು.