ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿಯು (ಸಿ.ಬಿ.ಎಸ್.ಇ.) 10ನೇ ಹಾಗೂ 12ನೇ ತರಗತಿಗಳ ಪರೀಕ್ಷಾ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ 50 ರೂಪಾಯಿಗಳಿಂದ 1200 ರೂಪಾಯಿಗಳಿಗೆ ಏರಿಕೆಯಾಗಿದೆ. ಸಾಮಾನ್ಯ ಪ್ರವರ್ಗದ ವಿದ್ಯಾರ್ಥಿಗಳಿಗೆ ಈ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ.
ಹಾಗಾಗಿ ಇನ್ನು ಸಾಮಾನ್ಯ ಪ್ರವರ್ಗದ ವಿದ್ಯಾರ್ಥಿಗಳು 1500 ರೂಪಾಯಿಗಳನ್ನು ಪರೀಕ್ಷಾ ಶುಲ್ಕವಾಗಿ ಪಾವತಿಸಬೇಕಾಗಿರುತ್ತದೆ.
10ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಮಂಡಳಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುತ್ತಾರೆ ಹಾಗೆಯೇ 12ನೇ ತರಗತಿಯ ವಿದ್ಯಾರ್ಥಿಗಳು ತಾವು 11ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ತಮ್ಮ ನೋಂದಣಿಯನ್ನು ಮಾಡಿಕೊಂಡಿರುತ್ತಾರೆ.
ಮಂಡಳಿಯು ಕಳೆದ ವಾರವಷ್ಟೇ ಈ ಕುರಿತಾಗಿ ಸಂಬಂಧಿತ ಶಾಲೆಗಳಿಗೆ ಮಾಹಿತಿ ನೀಡಿದೆ. ಮತ್ತು ಹಳೇ ಸೂಚನೆಗೆ ಅನುಗುಣವಾಗಿ ಶುಲ್ಕ ವಸೂಲಾತಿ ಮಾಡಿಕೊಂಡಿರುವ ಶಾಲೆಗಳಿಗೆ ವ್ಯತ್ಯಾಸ ಶುಲ್ಕ ಮೊತ್ತವನ್ನು ವಿದ್ಯಾರ್ಥಿಗಳಿಂದ ಪಡೆದುಕೊಳ್ಳುವಂತೆ ಮಂಡಳೀಯು ಈಗಾಗಲೇ ಮಾಹಿತಿ ನೀಡಿದೆ.
ಪರಿಷ್ಕೃತ ಪರೀಕ್ಷಾ ಶುಲ್ಕದನ್ವಯ ಪ.ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಗಳು ಐದು ವಿಷಯಗಳಿಗೆ 1200 ರೂಪಾಯಿ ಶುಲ್ಕವನ್ನು ಪಾವತಿಸಬೇಕು ಮತ್ತು ಸಾಮಾನ್ಯ ಪ್ರವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು 1500 ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.
12ನೇ ತರಗತಿಯ ಮಂಡಳಿ ಪರೀಕ್ಷೆಯಲ್ಲಿ ಹೆಚ್ಚುವರಿ ವಿಷಯಕ್ಕೆ ಪರೀಕ್ಷೆಯನ್ನು ಬರೆಯುವ ಪ.ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಯು ಇನ್ನು ಮುಂದೆ 300 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ, ಈ ಹಿಂದೆ ಇದಕ್ಕೆ ಯಾವುದೇ ರೀತಿಯ ಶುಲ್ಕ ಇರಲಿಲ್ಲ. ಸಾಮಾನ್ಯ ಪ್ರವರ್ಗದ ವಿದ್ಯಾರ್ಥಿಯೂ ಸಹ ಈ ಹಿಂದಿನ ಶುಲ್ಕ 150 ರೂಪಾಯಿಗಳ ಬದಲಿಗೆ 300 ರೂಪಾಯಿಗಳನ್ನು ಪಾವತಿಸಬೇಕಾಗಿರುತ್ತದೆ.