ನವದೆಹಲಿ: ಸಿ.ಬಿ.ಎಸ್.ಇ. 12ನೇ ತರಗತಿಯ ಎಕಾನಮಿಕ್ಸ್ ಮರುಪರೀಕ್ಷೆಯು ಎಪ್ರಿಲ್ 25ರಂದು ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್ ಆವರು ಪ್ರಕಟಿಸಿದ್ದಾರೆ. ಅದೇ ರೀತಿಯಾಗಿ ಹತ್ತನೇ ತರಗತಿಯ ಗಣಿತ ವಿಷಯದ ಮರುಪರೀಕ್ಷೆಯನ್ನು ಅಗತ್ಯಬಿದ್ದಲ್ಲಿ ಮಾತ್ರವೇ ದೆಹಲಿ ಹಾಗೂ ಹರ್ಯಾಣ ರಾಜ್ಯಗಳಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಹಾಗಾಗಿ ದೆಹಲಿ ಮತ್ತು ಹರ್ಯಾಣ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳ ಸಿ.ಬಿ.ಎಸ್.ಇ. ವಿದ್ಯಾರ್ಥಿಗಳು ಗಣಿತ ಮರುಪರೀಕ್ಷೆಯನ್ನು ಬರೆಯುವ ಸಂಕಷ್ಟದಿಂದ ಪಾರಾಗಿದ್ದಾರೆ. ಹಾಗೂ ದೆಹಲಿ, ಹರ್ಯಾಣ ರಾಜ್ಯಗಳಲ್ಲಿಯೂ ಗಣಿತ ಮರುಪರೀಕ್ಷೆ ನಡೆಸುವುದು ಇನ್ನೂ ದೃಢಪಟ್ಟಿಲ್ಲ.
ಹತ್ತನೇ ತರಗತಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯು ಪ್ರಗತಿಯಲ್ಲಿದೆ ಎಂದು ಸ್ವರೂಪ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಮತ್ತು ಈ ರೀತಿ ಸೋರಿಕೆಯಾಗಿರುವ ಪ್ರಶ್ನೆಪತ್ರಿಕೆಗಳು ದೆಹಲಿ ಹಾಗೂ ಹರ್ಯಾಣ ಭಾಗಗಳಲ್ಲಿ ಮಾತ್ರವೇ ಹಂಚಿಕೆಯಾಗಿರುವ ಸಾಧ್ಯತೆ ಇದೆ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.