ಹೊಸದಿಲ್ಲಿ /ಬೆಂಗಳೂರು: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಈ ವರ್ಷದ 12ನೇ ತರಗತಿಯ ಅರ್ಥಶಾಸ್ತ್ರ ಹಾಗೂ 10ನೇ ತರಗತಿಯ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ಎರಡು ಪರೀಕ್ಷೆಯನ್ನು ಪುನಃ ನಡೆಸಲು ಮಂಡಳಿ ತೀರ್ಮಾನಿಸಿದೆ. ದೇಶಾದ್ಯಂತ ಸೋಮವಾರ ಮಂಡಳಿಯ 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ನಡೆದಿತ್ತು. ಬುಧವಾರ, 10ನೇ ತರಗತಿಯ ಗಣಿತ ಪರೀಕ್ಷೆ ನಡೆದಿತ್ತು. ಈ ಎರಡೂ ವಿಷಯಗಳ ಪ್ರಶ್ನೆ ಪತ್ರಿಕೆಯ ಕೆಲವು ಭಾಗಗಳು ಸೋರಿಕೆಯಾಗಿದ್ದವು. ಪ್ರಧಾನಿ ಮೋದಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ಗೆ ಸೂಚಿಸಿದ್ದಾರೆ. ಈ ವಿಚಾರ ಗಮನಕ್ಕೆ ಬರುತ್ತಲೇ, ತನ್ನ ಅಧೀನದ ಎಲ್ಲಾ ವಿದ್ಯಾಸಂಸ್ಥೆಗಳಿಗೆ ಅಧಿಸೂಚನೆ ರವಾನಿಸಿರುವ ಸಿಬಿಎಸ್‌ಇ ಈ ಎರಡೂ ವಿಷಯಗಳಲ್ಲಿ ಮರು ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದು, ವಾರದೊಳಗೆ ಪರೀಕ್ಷಾ ದಿನಾಂಕ ಪ್ರಕಟಿಸುವುದಾಗಿ ಹೇಳಿದೆ.
ಕೈವಾಡದ ಶಂಕೆ: ಬೆಳವಣಿಗೆ ಬಗ್ಗೆ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ “ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ತಂಡವೊಂದರ ಕೈವಾಡ ಇರುವ ಶಂಕೆ ಇದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸೋಮವಾರದಿಂದ ಹೊಸ ಪರೀಕ್ಷಾ ವ್ಯವಸ್ಥೆ ಜಾರಿಗೆ ಬರಲಿದೆ ಎಂದಿದ್ದಾರೆ. ಜಾವಡೇಕರ್.
ಪ್ರಧಾನಿ ಮೋದಿ ವಿಷಾದ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್‌ಗೆ ಸೂಚಿಸಿ ದ್ದಾರೆ. ಕೇಂದ್ರ ಸಚಿವರ ಜತೆ ಮಾತನಾಡಿದ ಅವರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳು ವಂತೆ ಸೂಚಿಸಿದ್ದಾರೆ.
ಪೇಪರ್ ಲೀಕ್ ಸರಕಾರ: ಪ್ರಕರಣದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಇತ್ತೀಚೆಗೆ ನಡೆದಿದ್ದ ಸ್ಟಾಫ್ ಸೆಲೆಕ್ಷನ್ ಕಮಿಟಿ (ಎಸ್‌ಎಸ್‌ಸಿ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಬೆನ್ನಲ್ಲೇ ಇದೀಗ ಸಿಬಿಎಸ್‌ಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ. ಮೋದಿ ನೇತೃ ತ್ವದ ಸರಕಾರ “ಪೇಪರ್ ಲೀಕ್ ಸರಕಾರ’ ಆಗಿದೆ ಎಂದು ಕಾಂಗ್ರೆಸ್‌ನ ರಣದೀಪ್ ಸುಜೇìವಾಲ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.
ಎಸ್‌ಎಸ್‌ಸಿ ವತಿಯಿಂದಲೂ ಮರುಪರೀಕ್ಷೆ
ಫೆ. 21ರಂದು ನಡೆದಿದ್ದ ಎಸ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಬಹಿರಂಗವಾದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಅಂದು ಪರೀಕ್ಷೆಗೆ ಹಾಜರಾಗಿದ್ದವರಿಗಾಗಿ ಮರು ಪರೀಕ್ಷೆ ನಡೆಸಲು ಸ್ಟಾಫ್ ಸೆಲೆಕ್ಷನ್ ಕಮೀಷನ್ ತೀರ್ಮಾನಿಸಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ಹಾಗೂ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ, ಎಸ್‌ಎಸ್‌ಸಿ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ತಂಡವೊಂದನ್ನು ಬಂಧಿಸಿದೆ. ಈ ತಂಡವು, ಪರೀಕ್ಷಾ ಅಭ್ಯರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ “ಟೀಮ್ ವೀವರ್’ನಂತಹ ವಿಶೇಷ ಸಾಫ್ಟ್ವೇರ್‌ಗಳನ್ನು ಬಳಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾರೆಂದು ತನಿಖಾ ತಂಡ ಆಪಾದಿಸಿದೆ.