Advertisement

ಸಿಬಿಎಸ್‌ಇ : ಯಶಸ್‌ಗೆ ಯಶಸ್ಸು, ಚೆನ್ನೈ ವಲಯದಲ್ಲಿ ಹಳ್ಳಿ ಹುಡುಗನ ಸಾಧನೆ

02:23 AM May 07, 2019 | Team Udayavani |

ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳ್ಳೆಕಟ್ಟೆಯ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಡಿ.ಯಶಸ್‌ 500 ಕ್ಕೆ 498 ಅಂಕಗಳನ್ನು ಪಡೆದು ಚೆನ್ನೈ ದಕ್ಷಿಣ ವಲಯ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

Advertisement

ಯಶಸ್‌ ಹುಳಿಯಾರು ಸಮೀಪದ ಕಾಯಿ ತಿಮ್ಮನಹಳ್ಳಿ ಗ್ರಾಮದ ದೇವರಾಜು ಹಾಗೂ ನೇತ್ರಾವತಿ ದಂಪತಿ ಪುತ್ರ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಈತ ಕೇಂದ್ರಕ್ಕೆ 38 ನೇಯವನಾಗಿ ಹಾಗೂ ರಾಜ್ಯಕ್ಕೆ ಮೊದಲಿಗನಾಗಿ ಉತ್ತೀರ್ಣರಾಗಿದ್ದಾನೆ.

ಒಂದರಿಂದ ನಾಲ್ಕನೇ ತರಗತಿಯವರೆಗೆ ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯಲ್ಲಿ ಓದಿರುವ ಯಶಸ್‌, 5 ನೇ ತರಗತಿಯಿಂದ 10 ತರಗತಿಯವರಿಗೆ ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಓದಿ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾನೆ. ತಮ್ಮ ಮಗನ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪೋಷಕರು. ‘ಶೇ. 98 ರವರೆಗೂ ಅಂಕ ತೆಗೆಯಬಹುದು ಎಂದುಕೊಂಡಿದ್ದೇವಾದರೂ ರ್‍ಯಾಂಕ್‌ ನಿರೀಕ್ಷಿಸಿರಲಿಲ್ಲ. ಅವನು ರಾಜ್ಯಕ್ಕೆ ಪ್ರಥಮನಾಗಿರುವುದು ಅತ್ಯಂತ ಸಂತೋಷವಾಗಿದೆ’ ಎಂದು ಪತ್ರಿಕೆಯೊಂದಿಗೆ ಸಂಭ್ರಮ ಹಂಚಿಕೊಂಡರು.

ಯಶಸ್‌ ತಂದೆ ದೇವರಾಜು ಅವರು ತಿಮ್ಮನಹಳ್ಳಿಯಲ್ಲಿ ಕೃಷಿಕರು. ಇವರೂ ಎಂಜಿನಿಯರಿಂಗ್‌ ಪದವೀಧರರು. ಮೈಸೂರಿನಲ್ಲಿ ಇನ್ಸುóಮೆಂಟೇಶನ್‌ ಟೆಕ್ನಾಲಜಿಯ ಪದವೀಧರರಾದ ದೇವರಾಜು, ಇದೀಗ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

ಶೇ. 90ರಿಂದ ಶೇ. 95ರೊಳಗಿನ ಅಂಕಗಳನ್ನು ಪಡೆದಿರುವವರ ಸಂಖ್ಯೆ 57, 256ದಷ್ಟಿದೆ. ಮಂಡಳಿಯ cbseresults.nic.in ಮತ್ತು cbse.nic.in. ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫ‌ಲಿತಾಂಶ ನೋಡಬಹುದು. ಕಳೆದ ವರ್ಷ ಶೇ.97.37ರಷ್ಟು ಫ‌ಲಿತಾಂಶ ಬಂದಿತ್ತು. ಈ ಬಾರಿ ಶೇ.1.63ರಷ್ಟು ಹೆಚ್ಚಳವಾಗಿದೆ. ಚೆನ್ನೈ ವಲಯ ದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಪಾಂಡಿಚೇರಿ, ಅಂಡಮಾನ್‌ ನಿಕೋಬಾರ್‌ ದ್ವೀಪ ಹಾಗೂ ದಿವ್‌ ಮತ್ತು ದಮನ್‌ ಸೇರಿದ್ದು, ಫೆ.15ರಿಂದ ಏ.4ರವರೆಗೆ ಪರೀಕ್ಷೆ ನಡೆದಿತ್ತು. ಚೆನ್ನೈ ವಲಯದಿಂದ ಪರೀಕ್ಷೆ ಬರೆದಿದ್ದ 2.18 ಲಕ್ಷ ವಿದ್ಯಾರ್ಥಿಗಳಲ್ಲಿ 2.16 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.99.39ರಷ್ಟು ಹುಡುಗಿಯರು ಹಾಗೂ ಶೇ.98.7ರಷ್ಟು ಹುಡುಗರು ತೇರ್ಗಡೆ ಹೊಂದಿದ್ದಾರೆ.

Advertisement

ಕೇಂದ್ರೀಯ ವಿವಿಗಳ ಸಾಧನೆ: ಸೋಮವಾರ ಪ್ರಕಟಗೊಂಡ ಸಿಬಿಎಸ್‌ಇ 10ನೇ ತರಗತಿ ಫ‌ಲಿತಾಂಶದಲ್ಲಿ ಕೇಂದ್ರೀಯ ವಿದ್ಯಾಲಯಗಳು ದೇಶದ ಮಿಕ್ಕೆಲ್ಲಾ ವಿದ್ಯಾಸಂಸ್ಥೆಗಳ ಸಾಧನೆಗಳನ್ನು ಹಿಂದಿಕ್ಕಿವೆ. ಕೇಂದ್ರೀಯ ವಿವಿಗಳು ಶೇ. 99.47ರಷ್ಟು ಫ‌ಲಿತಾಂಶ ದಾಖಲಿಸಿದ್ದರೆ, ಕೇಂದ್ರ ಸರ್ಕಾರವೇ ನಡೆಸುವ ಜವಾಹರ ನವೋದಯ ವಿದ್ಯಾಲಯಗಳು ಶೇ. 98.57 ಫ‌ಲಿತಾಂಶ ಗಳಿಸಿವೆ. ಇನ್ನು, ಸಿಬಿಎಸ್‌ಇ ಪಠ್ಯ ಅಳವಡಿಸಿಕೊಂಡಿರುವ ದೇಶದ ಒಟ್ಟಾರೆ ಖಾಸಗಿ ವಿದ್ಯಾಸಂಸ್ಥೆಗಳ ಸಾಧನೆ ಶೇ. 94.15ರಷ್ಟಿದೆ.

ಸ್ಮತಿಗೆ ಡಬಲ್ ಸಂತಸ: ಮೂರು ದಿನಗಳ ಹಿಂದಷ್ಟೇ ಕೇಂದ್ರ ಸಚಿವೆ ಸ್ಮತಿ ಇರಾನಿಯ ಪುತ್ರ ಜೊಹರ್‌ ಅವರು, ಸಿಬಿಎಸ್‌ಸಿಯ 12ನೇ ತರಗತಿಯಲ್ಲಿ ಶೇ. 91 ಅಂಕಗಳನ್ನು ಪಡೆದು ತಮ್ಮ ತಂದೆ-ತಾಯಿಗೆ ಖುಷಿ ತಂದಿದ್ದರು. ಅದರ ಬೆನ್ನಿಗೇ, ಸೋಮವಾರ ಪ್ರಕಟಗೊಂಡಿರುವ ಸಿಬಿಎಸ್‌ಸಿ 10ನೇ ತರಗತಿಯ ಫ‌ಲಿತಾಂಶದಲ್ಲಿ ಸ್ಮತಿಯವರ ಪುತ್ರಿ ಶೇ. 82ರಷ್ಟು ಅಂಕ ಗಳಿಸಿ, ತಮ್ಮ ಕುಟುಂಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿದ್ದಾರೆ. ಟ್ವೀಟರ್‌ನಲ್ಲಿ ಈ ವಿಷಯ ತಿಳಿಸಿರುವ ಸ್ಮತಿ, ಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಗಿರಿಜಾ ಹೆಗಡೆ ದ್ವಿತೀಯ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಸಿಬಿಎಸ್‌ಇ ಶಾಲೆ ವಿದ್ಯಾರ್ಥಿನಿ ಗಿರಿಜಾ ಹೆಗಡೆ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ 500 ಅಂಕಗಳಿಗೆ 497 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಪಾಸಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಾಗಿದೆ. ಅದೇ ರೀತಿ ಹುಬ್ಬಳ್ಳಿಯ ಸಿಬಿಎಸ್‌ಇ ಶಾಲೆ ಫಲಿತಾಂಶ ಸಹ ನೂರರಷ್ಟಾಗಿದೆ. ಮಕ್ಕಳ ಸಾಧನೆಗೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಡಿ.ವೀರೇಂದ್ರ ಹೆಗ್ಗಡೆ, ಕಾರ್ಯದರ್ಶಿ ಡಾ| ನ.ವಜ್ರಕುಮಾರ, ವಿತ್ತಾಧಿಕಾರಿ ಡಾ| ಅಜಿತ ಪ್ರಸಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next