ನವದೆಹಲಿ:ಕಳೆದ ತಿಂಗಳು ತಪ್ಪಿನಿಂದಾಗಿ ಒಡಿಶಾ ಹೈಕೋರ್ಟ್ ನ್ಯಾಯಾಧೀಶರಾದ ಸಿಆರ್ ದಾಸ್ ಅವರ ನಿವಾಸಕ್ಕೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ಸಿದ್ಧ ಎಂದು ಸಿಬಿಐ ಶುಕ್ರವಾರ ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿದೆ.
ಆಕಸ್ಮಿಕವಾಗಿ ನಡೆದ ಘಟನೆ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ಬಳಿ ಷರತ್ತುರಹಿತ ಕ್ಷಮೆಯನ್ನು ಕೇಳುವ ಮೂಲಕ ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಸಿಬಿಐ ಬಯಸುವುದಾಗಿ ಸಿಬಿಐ ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಸ್ಟೀಸ್ ಎಕೆ ಸಿಕ್ರಿ ನೇತೃತ್ವದ ಪೀಠಕ್ಕೆ ವರದಿ ಸಲ್ಲಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ನ್ಯಾಯಾಧೀಶರನ್ನು ವೈಯಕ್ತಿಕವಾಗಿ ಭೇಟಿಯಾಗಿ ಕ್ಷಮೆ ಕೇಳಲು ಅಧಿಕಾರಿಗಳು ಮುಂದಾಗಿದ್ದರು, ಆದರೆ ಅದಕ್ಕೆ ಅವಕಾಶ ನೀಡಿಲ್ಲ. ಆ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳ ವಿರುದ್ಧ ದಾಖಲಾದ ಕಾನೂನು ಪ್ರಕ್ರಿಯೆಯನ್ನು ಕೈಬಿಡುವಂತೆ ಮೆಹ್ತಾ ಅವರು ಮನವಿ ಮಾಡಿಕೊಂಡರು.
ನಿವೃತ್ತ ನ್ಯಾಯಾಧೀಶರಾದ ಐಎಂ ಖುದ್ದುಸಿ ಅವರ ವಿರುದ್ಧ ಭ್ರಷ್ಟಾಚಾರದ ಪ್ರಕರಣದಡಿ ಎಫ್ಐಆರ್ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ರಾತ್ರಿ ಸಿಬಿಐ ಅಧಿಕಾರಿಗಳು ಕಟಕ್ ನಲ್ಲಿರುವ ಜಸ್ಟೀಸ್ ದಾಸ್ ನಿವಾಸಕ್ಕೆ ದಾಳಿ ನಡೆಸಿದ್ದರು. ಏಳು ವರ್ಷಗಳ ಹಿಂದೆ ಇದೇ ವಿಳಾಸದಲ್ಲಿ ಖುದ್ದುಸಿ ಕುಟುಂಬ ವಾಸವಾಗಿತ್ತು. ಆದರೆ ಅವರು ನಿವೃತ್ತರಾಗಿದ್ದರಿಂದ ಆ ವಿಳಾಸದಲ್ಲಿ ಜಡ್ಜ್ ದಾಸ್ ಮತ್ತು ಕುಟುಂಬ ವಾಸವಾಗಿತ್ತು. ತಮ್ಮ ತಪ್ಪಿನಿಂದಾಗಿ ದಾಸ್ ಅವರ ನಿವಾಸಕ್ಕೆ ದಾಳಿ ನಡೆಸಿದ್ದರು, ಆದರೆ ಬಂಗ್ಲೆಯಲ್ಲಿ ಖುದ್ದುಸಿ ಇಲ್ಲದಿದ್ದಾಗ ವಿಷಯ ಮನದಟ್ಟಾಗಿತ್ತು, ಕೂಡಲೇ ಸಿಬಿಐ ಅಧಿಕಾರಿಗಳು ಗಡಿಬಿಡಿಯಿಂದ ಜಡ್ಜ್ ದಾಸ್ ಅವರ ನಿವಾಸದಿಂದ ಹೊರನಡೆದಿರುವುದಾಗಿ ವರದಿ ವಿವರಿಸಿದೆ.
ಸಿಬಿಐ ದಾಳಿಯನ್ನು ಖಂಡಿಸಿ ಕಟಕ್ ನಲ್ಲಿ ವಕೀಲರು ಪ್ರತಿಭಟನೆ ನಡೆಸಿದ್ದರು. ಬಳಿಕ ಹೈಕೋರ್ಟ್ ಬಾರ್ ಅಸೋಸಿಯೇಶನ್ ಸಿಬಿಐ ಅಧಿಕಾರಿಗಳ ವಿರುದ್ಧ ದೂರನ್ನು ದಾಖಲಿಸಿತ್ತು.