ನವದೆಹಲಿ: ಉತ್ತರ ಪ್ರದೇಶದ ಬೈಕ್ ಬೋಟ್ ಎಂಬ ಹೆಸರಿನ ಕಂಪನಿ ಮಾಡಿರುವ 15,000 ಕೋಟಿ ರೂ. ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದ್ದು, ಈ ಕುರಿತಂತೆ ಸಿಬಿಐನಲ್ಲಿ ಎಫ್ಐಆರ್ ದಾಖಲಾಗಿದೆ. ಅದರಲ್ಲಿ ಬೈಕ್ ಬೋಟ್ ಕಂಪನಿಯ ಮುಖ್ಯ ನಿರ್ವಹಣಾ ನಿರ್ದೇಶಕ ಸಂಜಯ್ ಭಾಟಿ ಎಂಬವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ.
2017ರಲ್ಲಿ, ಬೈಕ್ ಬೋಟ್ ಹೆಸರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವ ಐಡಿಯಾವನ್ನು ಜನರ ಮುಂದಿಟ್ಟಿದ್ದ ಬೈಕ್ ಬೋಟ್ ಸಂಸ್ಥೆ, ಸಾರ್ವಜನಿಕರು ಎರಡು, ಮೂರು, ಐದು ಬೈಕ್‌ಗಳನ್ನು ಕಂಪನಿಗೆ ಹೂಡಿಕೆ ರೂಪದಲ್ಲಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಬೈಕ್‌ಗಳ ಸಂಪೂರ್ಣ ನಿರ್ವಹಣಾ ಖರ್ಚು ಕಂಪನಿಯದ್ದಾಗಿರುತ್ತದೆ. ಬೈಕ್‌ಗಳನ್ನು ನೀಡುವ ಗ್ರಾಹಕರಿಗೆ ತಿಂಗಳಿಗೆ ಇಂತಿಷ್ಟು ಬಾಡಿಗೆ, ಇಎಂಐ, ಹೆಚ್ಚು ಸಂಖ್ಯೆಯ ಬೈಕ್‌ಗಳನ್ನು ಕೊಟ್ಟವರಿಗೆ ಬೋನಸ್ ಅನ್ನೂ ನೀಡಲಾಗುತ್ತದೆ ಎಂದು ಕಂಪನಿ ಪ್ರಕಟಿಸಿತ್ತು.
ಇದನ್ನೂ ಓದಿ:ನ.8, 9ರಂದು ಚಿತ್ರದುರ್ಗದಲ್ಲಿ ಬುಡಕಟ್ಟು ಉತ್ಸವ: ಸಚಿವ ಶ್ರೀರಾಮುಲು
ಅಲ್ಲದೆ, ಕಂಪನಿಗೆ ಹೊಸ ಗ್ರಾಹಕರನ್ನು ಸೇರಿಸುವ ಗ್ರಾಹಕರಿಗೆ ಪ್ರೋತ್ಸಾಹ ಧನವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. 2019ರ ಆರಂಭದವರೆಗೆ ಮಾಸಿಕ ಬಾಡಿಗೆ, ಪ್ರೋತ್ಸಾಹ ಧನವನ್ನು ಗ್ರಾಹಕರಿಗೆ ಕಂಪನಿ ನೀಡುತ್ತಾ ಬಂದಿದ್ದ ಕಂಪನಿ ಆನಂತರ ಮೋಸ ಮಾಡಿದೆ ಎಂದು ಹೇಳಲಾಗಿದೆ.