ನವದೆಹಲಿ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಸುಪ್ರೀಂಕೋರ್ಟ್ ಬುಧವಾರ(ಆಗಸ್ಟ್ 19, 2020) ತೀರ್ಪು ನೀಡಿದೆ. ಇದರಿಂದ ಸುಶಾಂತ್ ಅಭಿಮಾನಿಗಳಿಗೆ ಹಾಗೂ ಕುಟುಂಬ ಸದಸ್ಯರಿಗೆ ನ್ಯಾಯ ಸಿಗಬಹುದು ಎಂಬ ವಿಶ್ವಾಸ ಹುಟ್ಟಿಸಿದೆ. ಇನ್ನು ಸುಶಾಂತ್ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಾವು ಜಿಯಾ ಖಾನ್ ಸಾವಿನ ಪ್ರಕರಣದ ಬಗ್ಗೆ ಪರಿಶೀಲಿಸೋಣ. ಜಿಯಾ ಖಾನ್ ಪ್ರಕರಣವನ್ನು ಕೂಡಾ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ಈಗಲೂ ಅದರ ತೀರ್ಪು ಹೊರಬಿದ್ದಿಲ್ಲ.
ನಿಜಕ್ಕೂ ಸಿಬಿಐ ತನಿಖೆಯಿಂದ ಸತ್ಯ ಬಯಲಾಗಬಹುದೇ, ಸುಶಾಂತ್ ಸಾವಿನ ಪ್ರಕರಣ ನಡೆದು 65 ದಿನಗಳ ಬಳಿಕ ಸುಪ್ರೀಂಕೋರ್ಟ್ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. ಈ ನಿಟ್ಟಿನಲ್ಲಿ ಜಿಯಾ ಖಾನ್ ಪ್ರಕರಣ ಏನಾಗಿದೆ ಎಂಬ ವಿಶ್ಲೇಷಣೆ ಇಲ್ಲಿದೆ.
ಸುಶಾಂತ್, ಜಿಯಾ ಪ್ರಕರಣ ಸಾಮ್ಯತೆ:
2013ರ ಜೂನ್ 3ರಂದು ಜಿಯಾ ಖಾನ್ ಮುಂಬೈನ ಜುಹು ನಿವಾಸದಲ್ಲಿ ತಮ್ಮ ದುಪ್ಪಟ್ಟಾದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
2013ರ ಜೂನ್ 7ರಂದು ಜಿಯಾ ಖಾನ್ ಸಹೋದರಿ ಬಳಿ ಆರು ಪುಟಗಳ ಸೂಸೈಡ್ ನೋಟ್ ಸಿಕ್ಕಿತ್ತು. ಅದರಲ್ಲಿ ಬಾಯ್ ಫ್ರೆಂಡ್ ಸೂರಜ್ ಪಾಂಚೋಲಿ ಹೆಸರು ಉಲ್ಲೇಖಿಸಲಾಗಿತ್ತು. ಅದರಲ್ಲಿ ತನಗೂ ಮತ್ತು ಬಾಯ್ ಫ್ರೆಂಡ್ ಸೂರಜ್ ಜತೆಗಿನ ತಿಕ್ಕಾಟದಿಂದಾಗಿಯೇ ಆತ್ಮಹತ್ಯೆಗೆ ಕಾರಣ ಎಂಬುದನ್ನು ಜಿಯಾ ಪತ್ರದಲ್ಲಿ ಸೂಚಿಸಲಾಗಿತ್ತು. ಅಬಾರ್ಷನ್ ಸೇರಿದಂತೆ ಹಲವು ವಿಚಾರ ಬಹಿರಂಗವಾದ ನಂತರ ಜಿಯಾ ತಾಯಿ ರಬೀಯಾ ಖಾನ್, ಜಿಯಾಳನ್ನು ಯಾರೋ ಹತ್ಯೆಗೈದಿದ್ದಾರೆ ಎಂದು ಆರೋಪಿಸಿದ್ದರು.
2013ರ ಜೂನ್ 10ರಂದು ಜಿಯಾ ಸೂಸೈಡ್ ನೋಟ್ ನಲ್ಲಿ ಸೂರಜ್ ಹೆಸರನ್ನು ನಮೂದಿಸಿರುವುದು ತುಂಬಾ ಮುಖ್ಯವಾದ ಸಾಕ್ಷಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸೂರಜ್ ನನ್ನು ವಶಕ್ಕೆ ತೆಗೆದುಕೊಂಡಿದ್ದರು.
2013ರ ಜುಲೈ 2ರಂದು ಬಾಂಬೆ ಹೈಕೋರ್ಟ್ ಸೂರಜ್ ಪಾಂಚೋಲಿಗೆ 2013ರ ಜುಲೈ2ರಂದು ಜಾಮೀನು ನೀಡಿತ್ತು.
2013ರ ಅಕ್ಟೋಬರ್ ನಲ್ಲಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಜಿಯಾ ತಾಯಿ ರಬೀಯಾ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
2014ರ ಜುಲೈ 3: ಸುಮಾರು ಒಂದು ವರ್ಷದ ನಂತರ ಬಾಂಬೆ ಹೈಕೋರ್ಟ್ ಜಿಯಾ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ತೀರ್ಪು ನೀಡಿತ್ತು. 2013ರಿಂದ ಈವರೆಗೂ ಸಿಬಿಐ ತನಿಖೆಯಲ್ಲಿನ ಲೋಪದೋಷಕ್ಕೆ ಕೋರ್ಟ್ ಹಲವಾರು ಬಾರಿ ಚಾಟಿ ಬೀಸಿರುವುದಾಗಿ ವರದಿ ವಿವರಿಸಿದೆ. ತನಿಖೆಯನ್ನು ಪೂರ್ಣಗೊಳಿಸಿ, ಆರೋಪಪಟ್ಟಿ ಸಲ್ಲಿಸಲು ಸಿಬಿಐ ವಿಫಲವಾಗಿದೆ.
2015ರ ಸೆಪ್ಟೆಂಬರ್ ನಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಕಂಡು ಅಸಮಾಧಾನಗೊಂಡ ರಬೀಯಾ ಖಾನ್, ಇಂಡಿಪೆಂಡೆಂಟ್ ವಿಧಿವಿಜ್ಞಾನ ತಜ್ಞ ಜೇಸನ್ ಪೇನೆ ಜೇಮ್ಸ್ ಅವರ ಮೂಲಕ ಸಾಕ್ಷ್ಯಗಳನ್ನು ಕಲೆಹಾಕತೊಡಗಿದ್ದರು. ಈ ವೇಳೆ ಸಿಬಿಐ ವೈಫಲ್ಯ ಕಂಡು ಬಂದಿತ್ತು. ಹೀಗೆ ಸ್ವತಂತ್ರ ವಿಧಿವಿಜ್ಞಾನ ನೀಡಿರುವ ವರದಿ ಬಹಳಷ್ಟು ಸತ್ಯಾಂಶವನ್ನು ಹೊರಹಾಕಿತ್ತು.
ಆದರೆ ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂರಜ್ ತಂದೆ ಆದಿತ್ಯ ಪಾಂಚೋಲಿ, ಇದು ಖಾಸಗಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಾಗಿದೆ. ಅಷ್ಟೇ ಅಲ್ಲ ಹಣಕೊಟ್ಟು ಮಾಡಿಸಿರುವ ವರದಿ. ಈ ವರದಿಯನ್ನು ಕೋರ್ಟ್ ಒಪ್ಪಿಕೊಳ್ಳುತ್ತದೋ ಅಥವಾ ಬಿಡುತ್ತದೋ ಎಂಬುದನ್ನು ನಾವು ನೋಡುತ್ತೇವೆ. ವಿವಿಧ ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯಲ್ಲಿ ಎಲ್ಲರೂ ಇದೊಂದು ಆತ್ಮಹತ್ಯೆ ಎಂಬ ನಿಲುವಿಗೆ ಬಂದಿದ್ದರು.
2015ರ ಡಿಸೆಂಬರ್ 09ರಂದು ಸಿಬಿಐ ವಿಶೇಷ ಮಹಿಳಾ ಕೋರ್ಟ್ ನಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿತ್ತು. ಅಲ್ಲಿ ನ್ಯಾಯಾಧೀಶರಾದ ಎಎಸ್ ಶಿಂಧೆ ಸಿಬಿಐ ತನಿಖೆ ತುಂಬಾ ವಿಳಂಬಗತಿಯಲ್ಲಿ ಸಾಗುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದರು. ಅಷ್ಟೇ ಅಲ್ಲ ಜಿಯಾ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು, ಆರೋಪಿ ಸೂರಜ್ ಪಾಂಜೋಲಿ ಪ್ರೇರಣೆಯಿಂದ ನಡೆದಿರುವುದಾಗಿ ಜಾರ್ಜ್ ಶೀಟ್ ಸಲ್ಲಿಸಿತ್ತು.
2015ರ ಡಿಸೆಂಬರ್ 9ರಂದು ಜಿಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 306ರ ಪ್ರಕಾರ ಸೂರಜ್ ಮೇಲೆ ಪ್ರಕರಣ ದಾಖಲಿಸಿತ್ತು.
2015ರ ಡಿಸೆಂಬರ್ 11ರಂದು ಜಾರ್ಜ್ ಶೀಟ್ ದಾಖಲಿಸಿದ ಎರಡು ದಿನದ ನಂತರ, ಜಿಯಾ ಪ್ರಕರಣದ ಕುರಿತ ನಿರ್ಣಾಯಕ ವಿವರವನ್ನು ಮಾಧ್ಯಮಕ್ಕೆ ಬಹಿರಂಗಗೊಳಿಸಿದ್ದ ಬಗ್ಗೆ ವಿಶೇಷ ಮಹಿಳಾ ಕೋರ್ಟ್ ಸಿಬಿಐಯನ್ನು ಪ್ರಶ್ನಿಸಿತ್ತು.
2018ರ ನವೆಂಬರ್ ನಲ್ಲಿ ಪ್ರಕರಣಕ್ಕೆ ಕುತೂಹಲಕಾರಿ ತಿರುವು ಎಂಬಂತೆ, ಆರೋಪಪಟ್ಟಿಯಲ್ಲಿ ಸೂರಜ್ ಹೆಸರು ಉಲ್ಲೇಖಿಸಿದ್ದರು ಕೂಡಾ ಒಂದು ಸಣ್ಣ ಸಾಕ್ಷ್ಯ ಕೂಡಾ ಆರೋಪ ಸಾಬೀತುಪಡಿಸಲು ಸಿಕ್ಕಿಲ್ಲವಾಗಿತ್ತು. 2013ರಲ್ಲಿ ಮುಂಬೈ ನಿವಾಸದಲ್ಲಿ ಜಿಯಾ ಆತ್ಮಹತ್ಯೆ ಮಾಡಿಕೊಳ್ಳಲು ಉಪಯೋಗಿಸಿದ್ದ ದುಪ್ಪಟ್ಟಾವನ್ನು ಹಾಜರುಪಡಿಸಲು ವಿಫಲವಾಗಿದ್ದಕ್ಕೆ ಕೋರ್ಟ್ ಸಿಬಿಐ ಮತ್ತು ಜುಹು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಅಂದು ಧರಿಸಿದ್ದ ಬಟ್ಟೆಯನ್ನು ಹಾಜರುಪಡಿಸಲು ಸಿಬಿಐ ವಿಫಲವಾಗಿತ್ತು ಎಂದು ವರದಿ ವಿವರಿಸಿದೆ.
ಸಿಬಿಐ ತನಿಖೆಯಲ್ಲಿ ಬಹಳಷ್ಟು ಲೋಪಗಳಿವೆ ಎಂದು ರಬೀಯಾ ವಕೀಲರಾದ ಸ್ವಪ್ನಿಲ್ ಅಬುರೆ ಕೋರ್ಟ್ ವಿಚಾರಣೆ ವೇಳೆ ಆರೋಪಿಸಿದ್ದರು., ಜಿಯಾಳನ್ನು ಮೊದಲು ಕತ್ತು ಹಿಸುಕಿ ಸಾಯಿಸಲಾಗಿತ್ತು. ಅದಕ್ಕೆ ಕಟ್ಟಡದಲ್ಲಿದ್ದ ಸಿಸಿಟಿವಿ ಫೂಟೇಜ್ ಸಾಕ್ಷಿ ಎಂದು ರಬೀಯಾ ತಿಳಿಸಿದ್ದು ತಿಳಿಸಿದ್ದರು. ಆದರೆ ಸಿಬಿಐ ವರದಿಯಲ್ಲಿ ಅಂತಹ ಯಾವುದೇ ಫೂಟೇಜ್ ಪತ್ತೆಯಾಗಿಲ್ಲ ಎಂದು ಉಲ್ಲೇಖಿಸಿತ್ತು. ಆ ನಂತರ ಜಿಯಾ ಖಾನ್ ಪ್ರಕರಣದಲ್ಲಿ ಹಲವಾರು ಅಸಂಬದ್ಧಗಳಿವೆ ಎಂದು ಆರೋಪಿಸಿ ರಬೀಯಾ ಸಿಬಿಐ ವಿರುದ್ಧ ದೂರು ದಾಖಲಿಸಿದ್ದರು.
2020ರ ಜೂನ್ ನಲ್ಲಿ ರಬೀಯಾ ಅವರು, ಸಿಬಿಐ ತನಿಖೆಯಲ್ಲಿ ಲೋಪ ಕಾಣಲು ಕಾರಣ ಬಾಲಿವುಡ್ ನಟ ಸಲ್ಮಾನ್ ಖಾನ್ ಶಾಮೀಲಾಗಿರುವುದು ಎಂದು ದೂರಿದ್ದರು. ಈ ಪ್ರಕರಣಕ್ಕಾಗಿ ನನ್ನ ಲಂಡನ್ ನಿಂದ ಮುಂಬೈಗೆ ಕರೆಸಲಾಗಿತ್ತು. ಅಂದು ಸಿಬಿಐ ಅಧಿಕಾರಿಯನ್ನು ಭೇಟಿಯಾದ ನಂತರ ತಿಳಿಸಿದ್ದು, ಈ ಪ್ರಕರಣವನ್ನು ಮುಂದುವರಿಸದಂತೆ ಸಲ್ಮಾನ್ ಖಾನ್ ಕರೆ ಮಾಡಿ, ಪ್ರಕರಣ ಮುಕ್ತಾಯಗೊಳಿಸುವಂತೆ ಸೂಚಿಸಿದ್ದರಂತೆ. ಅಷ್ಟೇ ಅಲ್ಲ ಸೂರಜ್ ಪಾಂಚೋಲಿಯಿಂದಲೂ ದೂರ ಇದ್ದು ಬಿಡಿ, ಯಾಕೆಂದರೆ “ಹೀರೋ” ಸಿನಿಮಾಕ್ಕಾಗಿ ಕೋಟ್ಯಂತರ ರೂಪಾಯಿ ಹಣ ಹೂಡಿದ್ದಾನೆ ಎಂದು ಸಲ್ಮಾನ್ ಸಿಬಿಐ ಅಧಿಕಾರಿಗೆ ಹೇಳಿದ್ದರು ಎಂದು ರಬೀಯಾ ತಿಳಿಸಿದ್ದರು. 2015ರಲ್ಲಿ ಹೀರೋ ಸಿನಿಮಾ ಬಿಡುಗಡೆಯಾಗಿತ್ತು.
ಈ ಪ್ರಕರಣ ನಡೆದು ಎಂಟು ವರ್ಷ ಕಳೆಯುತ್ತಾ ಬಂದಿದೆ, ಈಗಲೂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಬಿಟ್ಟರೆ ಬೇರೆನೂ ಆಗಿಲ್ಲ. ರಬೀಯಾ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಸುಶಾಂತ್ ಪ್ರಕರಣದ ತನಿಖೆ ಸಿಬಿಐ ನಡೆಸಲಿ ಎಂಬುದಕ್ಕೆ ಧ್ವನಿಗೂಡಿಸಿದ್ದಾರೆ. ಸುಶಾಂತ್ ಹಾಗೂ ಜಿಯಾ ಎರಡು ಪ್ರಕರಣಗಳಲ್ಲಿಯೂ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಸಿಬಿಐ ತನಿಖೆಯಿಂದ ಅಂತಿಮ ಫಲಿತಾಂಶ ಏನು ಬರಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.