ಹೊಸದಿಲ್ಲಿ: ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ), ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ (ಎಫ್ಐಎಚ್) ಅಧ್ಯಕ್ಷ ಸ್ಥಾನಕ್ಕೆ ನರೀಂದರ್ ಬಾತ್ರಾ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ವಿರುದ್ಧ ಸಿಬಿಐ ತನಿಖೆ ಆರಂಭವಾಗಿದೆ.
ಬಾತ್ರಾ ಸ್ವಹಿತಾಸಕ್ತಿಯಲ್ಲಿ ಪಾಲ್ಗೊಂಡಿದ್ದಾರೆ, ಅವರು ಹಾಕಿ ಇಂಡಿಯಾ ಆಜೀವ ಸದಸ್ಯತ್ವ ಹೊಂದಿರುವುದು ಅಸಾಂವಿಧಾನಿಕ ಎಂದು ಮಾಜಿ ಹಾಕಿ ಆಟಗಾರ ಅಸ್ಲಾಮ್ ಶೇರ್ ಖಾನ್ ದಿಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅದನ್ನು ನ್ಯಾಯಪೀಠ ಪುರಸ್ಕರಿಸಿತ್ತು. ಇದೇ ವೇಳೆ ಅವರು ಹಾಕಿ ಇಂಡಿಯಾದಲ್ಲಿ 35 ಲಕ್ಷ ರೂ. ಹಣ ದುರುಪಯೋಗ ಮಾಡಿಕೊಂಡಿ ದ್ದಾರೆಂದೂ ಆರೋಪಿಸಲಾಗಿತ್ತು. ಈ ಬಗ್ಗೆ ಎಪ್ರಿಲ್‌ನಲ್ಲೇ ಸಿಬಿಐ ವಿಚಾರಣೆ ಶುರು ಮಾಡಿತ್ತು.
ಬಾತ್ರಾ ವಿಚಾರಣೆ ಆರಂಭಿಸಿರುವ ಸಿಬಿಐ, ಹಾಕಿ ಇಂಡಿಯಾ ಮಾಜಿ ಅಧ್ಯಕ್ಷ ರಾಜೀಂದರ್ ಸಿಂಗ್, ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮುಷ್ತಾಖ್ ಅಹ್ಮದ್, ಮಾಜಿ ಕಾರ್ಯಕಾರಿ ನಿರ್ದೇಶಕ ಆರ್.ಕೆ. ಶ್ರೀವಾಸ್ತವ ಅವರ ವಿರುದ್ಧವೂ ದೂರು ದಾಖಲಿಸಿಕೊಂಡಿದೆ. ಇವರೆಲ್ಲ ಸೇರಿ 2018ರಲ್ಲಿ ಐಒಎ ಹಣವನ್ನು ದುರ್ಬಳಕೆ ಮಾಡಿದ್ದಾರೆನ್ನುವುದು ಆರೋಪ.
ಹಾಕಿ ಇಂಡಿಯಾ ಮಾಜಿ ಅಧ್ಯಕ್ಷರಾಗಿರುವ ಬಾತ್ರಾ, 2017ರಲ್ಲಿ ಹಾಕಿ ಇಂಡಿಯಾದ ಆಜೀವ ಸದಸ್ಯತ್ವದ ಆಧಾರದಲ್ಲಿ ಐಒಎ ಅಧ್ಯಕ್ಷರಾಗಿ ನಿಯುಕ್ತಿಗೊಂಡರು. ಇದೇ ಆಧಾರದಲ್ಲಿ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೂ ಅಧ್ಯಕ್ಷರಾಗಿದ್ದರು. ಈಗ ಒಮ್ಮೆಲೇ ಎಲ್ಲ ಹುದ್ದೆಗಳಿಂದ ಕೆಳಕ್ಕಿಳಿದಿದ್ದಾರೆ.