Advertisement

ದೇಶದ 20 ರಾಜ್ಯಗಳ ಮೇಲೆ ಸಿಬಿಐ ದಾಳಿ; ಆಪರೇಷನ್‌ ಮೇಘಚಕ್ರ

12:56 AM Sep 25, 2022 | Team Udayavani |

ಹೊಸದಿಲ್ಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಡಿಯೋ ಮತ್ತು ವೀಡಿಯೋ ಗಳನ್ನು(ಸಿಎಸ್‌ಎಎಂ) ಆನ್‌ಲೈನ್‌ನಲ್ಲಿ ಹಂಚಿಕೆ ಮಾಡಿದ ಆರೋಪದಲ್ಲಿ ಕರ್ನಾ ಟಕ ಸಹಿತ 20 ರಾಜ್ಯಗಳ 56 ಸ್ಥಳಗಳ ಮೇಲೆ ಸಿಬಿಐ ಶನಿವಾರ ದಿಢೀರ್‌ ದಾಳಿ ನಡೆಸಿದೆ. ಈ ದಾಳಿಗೆ “ಆಪರೇಷನ್‌ ಮೇಘಚಕ್ರ’ ಎಂದು ಹೆಸರಿಡಲಾಗಿದೆ.

Advertisement

ಕ್ಲೌಡ್ ಸ್ಟೋರೇಜ್‌ ಬಳಸಿ ಇಂಟರ್‌ನೆಟ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆಡಿಯೋ-
ವಿಡಿಯೋಗಳ ದಂಧೆ ನಡೆಸುತ್ತಿದ್ದ ಪೆಡ್ಲರ್‌ಗಳ ವಿರುದ್ಧ ಕಳೆದ ವರ್ಷ “ಆಪರೇಷನ್‌ ಕಾರ್ಬನ್‌’ ಎಂಬ ಕಾರ್ಯಾಚರಣೆ ನಡೆಸಲಾಗಿತ್ತು.

ಆ ಸಂದರ್ಭದಲ್ಲಿ ದೊರೆತ ಗುಪ್ತಚರ ಮಾಹಿತಿ ಮತ್ತು ಸಿಂಗಾಪುರದ ಇಂಟರ್‌ಪೋಲ್‌ನ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ಅಶ್ಲೀಲ ವೀಡಿಯೋಗಳ ಹಂಚಿಕೆ ಪ್ರಕರಣ ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿಸ್ತೃತ ವರದಿಯನ್ನು ಸಲ್ಲಿಸಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಕಳೆದ ವಾರವಷ್ಟೇ ನಿರ್ದೇಶನ ನೀಡಿತ್ತು. ಅದರ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.

ಎಲ್ಲೆಲ್ಲಿ ಶೋಧ ಕಾರ್ಯ?
ಕರ್ನಾಟಕ, ಹಿಮಾಚಲ ಪ್ರದೇಶ, ಪಂಜಾಬ್‌, ಹರಿಯಾಣ, ದಿಲ್ಲಿ, ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್‌, ಛತ್ತೀಸ್‌ಗಡ, ಮಹಾರಾಷ್ಟ್ರ, ಗುಜರಾತ್‌, ತೆಲಂಗಾಣ, ತಮಿಳುನಾಡು ಸಹಿತ 20 ರಾಜ್ಯಗಳ 56 ಸ್ಥಳಗಳಲ್ಲಿ ಶನಿವಾರ ದಾಳಿ ನಡೆದಿದೆ. ಅಪ್ರಾಪ್ತ ವಯಸ್ಸಿನವರ ಲೈಂಗಿಕ ಚಟುವಟಿಕೆಗಳ ಆಡಿಯೋ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳಲು ಪೆಡ್ಲರ್‌ಗಳು ಬಳಸುವ ಕ್ಲೌಡ್ ಸ್ಟೋರೇಜ್‌ಗಳನ್ನು ಗುರಿಯಾಗಿಸಿಕೊಂಡು ಸಿಬಿಐನ ಸೈಬರ್‌ ಅಪರಾಧ ಘಟಕ ಈ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ರಾಜ್ಯದ 4 ಜಿಲ್ಲೆಗಳಲ್ಲಿ ದಾಳಿ
ಬೆಂಗಳೂರು: ಸಿಬಿಐ ಹಾಗೂ ಕೇಂದ್ರದ ಇತರೆ ತನಿಖಾ ಸಂಸ್ಥೆಗಳು ಶನಿವಾರ ಬೆಂಗಳೂರಿನ 4 ಕಡೆ, ರಾಮನಗರ, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಸಿಬಿಐ ಏಕಕಾಲಕ್ಕೆ ದಾಳಿ ನಡೆಸಿದೆ. ಇತ್ತೀಚೆಗೆ ಮಕ್ಕಳಿಗೆ ಸಂಬಂ ಧಿಸಿ ಲೈಂಗಿಕ ಪ್ರಚೋದನೆ ಯ ವಿಡಿಯೋಗಳನ್ನು ಕೆಲವರು ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಣೆ ಮತ್ತು ಅವುಗಳನ್ನು ವೆಬ್‌ಸೈಟ್‌, ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿಸುವ ಕುರಿತು ತನಿಖಾ ಸಂಸ್ಥೆಗಳು ನಿಗಾ ವಹಿಸಿದ್ದವು. ಈ ಕುರಿತು ಆಗಾಗ್ಗೆ ರಾಜ್ಯದ ಸಿಐಡಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದು, ಈ ಕುರಿತು ಡೌನ್‌ಲೋಡ್‌ ಅಥವಾ ಅಪ್‌ಲೋಡ್‌ ಮಾಡಿದ ವ್ಯಕ್ತಿ ವಾಸವಾಗಿರುವ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ (ಟಿಪ್‌ಲೈನ್‌) ಪ್ರಕರಣಗಳು ದಾಖಲಾಗುತ್ತಿವೆ. ಈ ಬೆನ್ನಲ್ಲೇ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next