ನವದೆಹಲಿ/ಕೋಲ್ಕತಾ:ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮಬಂಗಾಳ, ಜಾರ್ಖಂಡ್ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿನ 45 ಸ್ಥಳಗಳಲ್ಲಿ ಸಿಬಿಐ ಶನಿವಾರ(ನವೆಂಬರ್ 28, 2020) ದಾಳಿ ನಡೆಸಿದೆ.
ಪಶ್ಚಿಮಬಂಗಾಳ ಮತ್ತು ಜಾರ್ಖಂಡ್ ನಲ್ಲಿ ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್(ಇಸಿಎಲ್)ನ ಇಬ್ಬರು ಜನರಲ್ ಮ್ಯಾನೇಜರ್ಸ್, ಇಬ್ಬರು ಅಧಿಕಾರಿಗಳು ಮತ್ತು ಮುಖ್ಯ ಭದ್ರತಾ ಅಧಿಕಾರಿ, ಖಾಸಗಿ ವ್ಯಕ್ತಿ ಅನುಪ್ ಮಾಜ್ ಹಿ ವಿರುದ್ಧ ಶುಕ್ರವಾರ(ನವೆಂಬರ್ 27, 2020) ದಾಖಲಾದ ದೂರಿನ ಆಧಾರದ ಮೇಲೆ ಈ ಶೋಧ ಕಾರ್ಯ ನಡೆಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಮಾಜ್ ಹಿ ಪಶ್ಚಿಮಬಂಗಾಳದ ಅಕ್ರಮ ಗಣಿಗಾರಿಕೆಯ ರೂವಾರಿ ಎಂದು ದೂರಿನಲ್ಲಿ ತಿಳಿಸಿದ್ದು, ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಶಂಕಿತರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ.
ಇದನ್ನೂ ಓದಿ:ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್
ಅಲ್ಲದೇ ಉತ್ತರಪ್ರದೇಶ, ಜಾರ್ಖಂಡ್ ಮತ್ತು ಬಿಹಾರದಲ್ಲಿಯೂ ಕೂಡಲೇ ದಾಳಿ ನಡೆಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ. ಪಶ್ಚಿಮಬಂಗಾಳದ ಅಸಾನ್ಸೋಲ್ ಮತ್ತು ಇತರ ಪ್ರದೇಶಗಳು, ಬುರ್ದ್ವಾನ್ ಜಿಲ್ಲೆಯ ರಾಣಿಗಂಝ್, ದುರ್ಗಾಪುರ್, ಬಿಷ್ಣುಪುರ್ ನಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.