ಬಿಹಾರ : ಲಾಲು ಪ್ರಸಾದ್ ಯಾದವ್ ಅವರ ಅಧಿಕಾರಾವಧಿ ವೇಳೆ ಬಿಹಾರದಲ್ಲಿ ನಡೆದ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕರಾದ ಅಶ್ಫಾಕ್ ಕರೀಮ್ ಮತ್ತು ಸುನಿಲ್ ಸಿಂಗ್ ಅವರ ಮೇಲೆ ಕೇಂದ್ರೀಯ ತನಿಖಾ ದಳವು ಬುಧವಾರ ದಾಳಿ ನಡೆಸಿದೆ.
ಅಧಿಕಾರಿಗಳ ತಂಡ ಬಿಹಾರ, ತಮಿಳುನಾಡು ಸೇರಿದಂತೆ ಒಟ್ಟು 17 ಕಡೆ ದಾಳಿ ನಡೆಸಿದ್ದಾರೆ.
ಎನ್‍ಡಿಎಯಿಂದ ಬೇರ್ಪಟ್ಟ ಜನತಾ ದಳ ಆರ್‌ಜೆಡಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿದ ಎರಡು ವಾರಗಳ ಬಳಿಕ ಈ ದಾಳಿ ನಡೆದಿದ್ದು ಇದೊಂದು ಪೂರ್ವ ನಿಯೋಜಿತ ಸಂಚು ಎಂದು ಆರ್‌ಜೆಡಿ ನಾಯಕ ಸುನಿಲ್ ಸಿಂಗ್ ಹೇಳಿದ್ದಾರೆ.
ಆರ್‌ಜೆಡಿ ಬೆಂಬಲಿತ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತು ಪಡಿಸಲು ತಯಾರಿ ನಡೆಸುತ್ತಿರುವ ನಡುವೆಯೇ ಸಿಬಿಐ ದಾಳಿ ಶಾಕ್ ನೀಡಿದೆ.
ಬಿಜೆಪಿ ಜೊತೆಗಿನ ಮೈತ್ರಿ ಸರ್ಕಾರಕ್ಕೆ ನಿತೀಶ್ ಕುಮಾರ್ ಅಂತ್ಯ ಹಾಡಿ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳ ಜೊತೆ ಕೈಜೋಡಿಸಿ ಇತ್ತೀಚೆಗೆ ಬಿಹಾರದಲ್ಲಿ ಸರ್ಕಾರ ರಚಿಸಿದ್ದರು.