ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ.
ಏಕಕಾಲದಲ್ಲಿ ಹಲವು ಕಡೆ ದಾಳಿ ನಡೆಸಲಾಗಿದ್ದು, ರಾಮನಗರ ಜಿಲ್ಲೆಯ ಕನಕಪುರ ತಾಲೂಕು ದೊಡ್ಡಾಲಹಳ್ಳಿ ಗ್ರಾಮದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೆಯನ್ನೆಲ್ಲಾ ಪರಿಶೀಲನೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಮನೆಯಲ್ಲಿದ್ದ ಲಾಕರ್ ಒಡೆದಾಗ ಒಂದು ರೂಪಾಯಿಯ ಹಲವು ನಾಣ್ಯಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ದೆಹಲಿ, ಮುಂಬೈಯಲ್ಲೂ ಸಿಬಿಐ ದಾಳಿ: ಡಿಕೆಶಿ ವಿರುದ್ಧ ಸಿಬಿಐನಿಂದ ಎಫ್ ಐಆರ್ ದಾಖಲು
ಎಳು ಜನರ ಸಿಬಿಐ ಅಧಿಕಾರಿಗಳ ತಂಡ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲಸದವರು ಮಾತ್ರ ಈ ಮನೆಯಲ್ಲಿದ್ದರು. ಮನೆಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು, ಮನೆಯ ಲಾಕರ್ ಒಡೆಯಲು ಪ್ರಯತ್ನ ಪಟ್ಟಿದ್ದಾರೆ. ಲಾಕರ್ ಕೀ ಸಿಗದ ಹಿನ್ನಲೆಯಲ್ಲಿ ಅಧಿಕಾರಿಗಳು, ಹಾರೆ- ಸುತ್ತಿಗೆ ಬಳಸಿ ಲಾಕರ್ ಒಡೆದಿದ್ದಾರೆ. ಆದರೆ ಲಾಕರ್ ಒಳಗೆ ಮುಷ್ಟಿಯಷ್ಟು ನಾಣ್ಯಗಳು ಮಾತ್ರ ಸಿಕ್ಕಿದೆ.
ದೊಡ್ಡಾಲಹಳ್ಳಿ ಮನೆಯ ಮುಂಭಾಗದಲ್ಲಿ ಸ್ಥಳೀಯರು ಜಮಾಯಿಸಿದ್ದು, ಸಿಬಿಐ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಡಿಕೆ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ: ಬಿಜೆಪಿ ಸರ್ಕಾರದ ವಿರುದ್ಧ ಗರಂ ಆದ ಕೈ ನಾಯಕರು