ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲಿ ಮೂರು ಪ್ರಕರಣಗಳನ್ನು ಸಿಬಿಐಗೆ ವಹಿಸಿದಂತಾಗಿದೆ.
ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಕೊಲೆಯಾದ ಯೋಗೀಶ್ ಗೌಡ ಬಿಜೆಪಿಯ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದರಿಂದ ಬಿಜೆಪಿ, ಈ ಪ್ರಕರಣದ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಆರೋಪಿಸಿತ್ತು. ಅಲ್ಲದೆ, ಸಿಬಿಐಗೆ ವಹಿಸುವಂತೆ ಆಗ್ರಹಿಸಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಈ ಪ್ರಕರಣವನ್ನೂ ಸಿಬಿಐಗೆ ವಹಿಸುವ ಮೂಲಕ ಮತ್ತೂಂದು ರಾಜಕೀಯ ಬೆರೆತ ಪ್ರಕರಣಕ್ಕೆ ಜೀವ ಕೊಟ್ಟಂತಾಗಿದೆ.
2016ರ ಜೂನ್ 15ರಂದು ಯೋಗೀಶ್ ಗೌಡ, ಧಾರವಾಡದ ಸಪ್ತಾಪುರದಲ್ಲಿರುವ ತಮ್ಮ ಜಿಮ್‌ನಲ್ಲಿ ಬೆಳಗಿನ ಜಾವ ವ್ಯಾಯಾಮ ಮಾಡುತ್ತಿರುವ ಸಂದರ್ಭದಲ್ಲಿ ಅವರ ಕೊಲೆಯಾಗಿತ್ತು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಧಾರವಾಡದ ಐವರು ಸೇರಿ ಕೊಲೆಗೈದಿದ್ದರು.
ಕೊಲೆ ನಡೆದ ಮೂರೇ ದಿನಕ್ಕೆ ಆರೋಪಿಗಳು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಯೋಗೀಶ್ ಗೌಡ ಅವರಿಂದ ಜೀವ ಬೆದರಿಕೆ ಇದ್ದು, ಈ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಎರಡು ವರ್ಷ ಜೈಲಿನಲ್ಲಿದ್ದ ಆರೋಪಿಗಳು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಬಿಜೆಪಿ ಈ ಬಗ್ಗೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿತ್ತು. ಧಾರವಾಡದ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ಈ ಸಂಬಂಧ ಯೋಗೀಶ್ ಗೌಡ ಸಹೋದರ, ಗುರುನಾಥ ಗೌಡ ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿವೆ.