Advertisement

ಟೆಕ್ಕಿ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ ಹೈ ಅಸ್ತು

12:37 PM Oct 23, 2018 | Team Udayavani |

ಬೆಂಗಳೂರು: ಟೆಕ್ಕಿ ಕುಮಾರ್‌ ಅಜಿತಾಬ್‌ ನಿಗೂಢ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸೋಮವಾರ ಹೈಕೋರ್ಟ್‌ ಆದೇಶಿಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಅಜಿತಾಬ್‌ ತಂದೆ ಅಶೋಕ್‌ಕುಮಾರ್‌ ಸಿನ್ಹಾ ಸಲ್ಲಿಸಿದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾ. ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ ತೀರ್ಪನ್ನು ಸೋಮವಾರ ಪ್ರಕಟಿಸಿ ಸಿಬಿಐ ತನಿಖೆಗೆ ವಹಿಸಿ ಆದೇಶ ನೀಡಿದೆ.

Advertisement

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ರಾಜ್ಯದ ಎಸ್‌ಐಟಿ ಅಧಿಕಾರಿಗಳು ತಕ್ಷಣವೇ ಸಿಬಿಐಗೆ ವಹಿಸಬೇಕು. ಸಿಬಿಐ ಅಧಿಕಾರಿಗಳು ಕೂಡಲೇ ತನಿಖೆ ಆರಂಭಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ. ರಾಜ್ಯದ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲೂ ಪ್ರಕರಣದ ತನಿಖೆಯನ್ನು ನಡೆಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಲೋಪ ಅಥವಾ ಕೊರತೆ ಇಲ್ಲ.

ಆದರೆ, ಇತರೆ ರಾಜ್ಯಗಳ ತನಿಖಾ ಸಂಸ್ಥೆಗಳ ಜೊತೆಗಿನ ಸಮನ್ವಯದ ಕೊರತೆಯಿಂದಾಗಿ ನಿರೀಕ್ಷಿತ ಫ‌ಲಿತಾಂಶ ಸಿಕ್ಕಿಲ್ಲ. ಇದಲ್ಲದೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕಾಗಿದೆ. ಹಾಗಾಗಿ ಇತರೆ ರಾಜ್ಯಗಳ ಸಮನ್ವಯ ಹಾಗೂ ತಂದೆಯ ಪರಿಸ್ಥಿತಿಯನ್ನು ಪರಿಗಣಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗುತ್ತಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಟೆಕ್ಕಿ ಕುಮಾರ್‌ ಅಜಿತಾಬ್ 2017ರ ಡಿಸೆಂಬರ್‌ 18ರ ಸಂಜೆ 6.30ಕ್ಕೆ ಓಎಲ್‌ಎಕ್ಸ್‌ನಲ್ಲಿ ಕಾರು ಮಾರಲು ತಮ್ಮ ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ. ಈ ಬಗ್ಗೆ ಅಜಿತಾಬ್ ತಂದೆ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಡಿ. 20 ಹಾಗೂ 29ರಂದು ಎರಡು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ಈ ಮಧ್ಯೆ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಆದರೆ,  ಅಜಿತಾಬ್  ಪತ್ತೆ ಹಚ್ಚುವಲ್ಲಿ ಪೊಲೀಸರು ಯಾವುದೇ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಅಶೋಕ್‌ ಕುಮಾರ್‌ ಸಿನ್ಹಾ ಹೈಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಸಿಬಿಐ ತನಿಖೆಗೆ ವಹಿಸಿ ಹೈಕೋರ್ಟ್‌ ಆದೇಶಿಸಿದೆ.

Advertisement

ಪುತ್ರ ಶೋಕಂ ನಿರಂತರಂ: ತೀರ್ಪಿನಲ್ಲಿ ರಾಮಾಯಣದ ಉಕ್ತಿಯೊಂದನ್ನು ಉಲ್ಲೇಖೀಸಿದ ಹೈಕೋರ್ಟ್‌ “ಪುತ್ರ ಶೋಕಂ ನಿರಂತರಂ’ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ರಾಮ ವನವಾಸಕ್ಕೆ ಹೋದಾಗ ತಂದೆ ದಶರಥ ಮಗನಿಗಾಗಿ ವ್ಯಥೆ ಪಡುತ್ತಾನೆ.

ಅದೇ ರೀತಿ ಅಜಿತಾಬ್‌ ನಾಪತ್ತೆಯಾದ ದಿನದಿಂದ ಆತನ ತಂದೆ ಹಾಗೂ ಕುಟುಂಬದ ಸದಸ್ಯರು ಆತಂಕದಲ್ಲೇ ದಿನಗಳನ್ನು ಎದುರು ನೋಡುತ್ತಿದ್ದಾರೆ. ಎಸ್‌ಐಟಿ  ತನಿಖೆಯಿಂದ ಯಾವುದೇ ಫ‌ಲಿತಾಂಶ ಸಿಕ್ಕಿಲ್ಲ ಅನ್ನುವುದು ತಂದೆಯ ಆತಂಕವಾಗಿದೆ. ತಂದೆಯ ಪರಿಸ್ಥಿತಿಯನ್ನು ಪರಿಗಣಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗುತ್ತಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next