ದಾವಣಗೆರೆ: ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬರುತ್ತಿರುವ ಆರೋಪದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ಮೇ. 30 ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬುಳ್ಳಾಪುರದ ಹನುಮಂತಪ್ಪ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 11:30ಕ್ಕೆ ಪ್ರತಿಭಟನೆ ನಡೆಸಿ ತಾಲೂಕು ಆಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ (ಎಂ.ಎನ್. ನಂಜುಂಡಸ್ವಾಮಿ ಬಣ) ಅಧ್ಯಕ್ಷರಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಕೆಎಸ್ಸಾರ್ಟಿಸಿ ಹೋರಾಟ ನಿಲ್ಲಿಸಲು 35 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ರೈತರ ಪರವಾಗಿ ಕೆಲಸ ಮಾಡಬೇಕಾದವರು ರೈತರು, ಕಾರ್ಮಿಕರ ವಿರುದ್ಧವೇ ನಡೆದುಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯ. ಅವರ ನಡೆಯನ್ನು ಜಿಲ್ಲಾ ರೈತ ಸಂಘ ಪ್ರಬಲವಾಗಿ ಖಂಡಿಸುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆರೋಪದ ಹಿಂದಿನ ಸತ್ಯಾಸತ್ಯತೆಯನ್ನು ಬಯಲಿಗೆ ತಂದು ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಭ್ರಷ್ಟಾಚಾರ-ಅವ್ಯವಹಾರ ಆರೋಪ ಎದುರಿಸುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಕೂಡಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ತಪ್ಪು ಮಾಡಿರುವುದು ಸಾಬೀತಾದಲ್ಲಿ ಸರ್ಕಾರ ಕೂಡಲೇ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ರೈತ ಸಂಘದ ಹೋರಾಟದ 36 ವರ್ಷದ ಇತಿಹಾಸದಲ್ಲಿ ಯಾವುದೇ ಸಂಘದ ರಾಜ್ಯಾಧ್ಯಕ್ಷರ ವಿರುದ್ಧ ಇಂತಹ ಆರೋಪ ಕೇಳಿ ಬಂದಿರಲಿಲ್ಲ. ಇದೊಂದು ಕಪ್ಪುಚುಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಂ.ಎನ್. ನಂಜುಂಡಸ್ವಾಮಿ ಸಿಡಿಲಿನಂತೆ ಮಾತನಾಡುತ್ತಿದ್ದವರು. ಅವರು ಸದಾ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದವರು. ಅವರ ಬಣದ ಅಧ್ಯಕ್ಷ ಎಂಬುದಾಗಿ ಹಿಟ್ಲರ್ ಮಾದರಿಯಲ್ಲಿ ಸರ್ವಾಧಿಕಾರಿಯಂತೆ ಸಂಘವನ್ನು ನಡೆಸಿಕೊಳ್ಳುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಾಂಕೇತಿಕ ಹೋರಾಟ ನಡೆಸಲಾಗುವುದು. ಆರೋಪ ರುಜುವಾತದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಾವಣಗೆರೆ ತಾಲೂಕು ಅಧ್ಯಕ್ಷ ಎ.ಆರ್. ಈಚಘಟ್ಟದ ಕರಿಬಸಪ್ಪ, ಕೊಗ್ಗನೂರು ಹನುಮಂತಪ್ಪ, ಕೊಗ್ಗನೂರು ರಾಜಣ್ಣ, ಈಚಘಟ್ಟದ ಚನ್ನಬಸಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.