ನವದೆಹಲಿ: ಇತ್ತೀಚೆಗೆ ಬಿಹಾರದಲ್ಲಿ ನಡೆದ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಪಾಟ್ನಾದ ಇಬ್ಬರನ್ನು ಬಂಧಿಸುವ ಮೂಲಕ ಪ್ರಕರಣದಲ್ಲಿ ಮೊದಲ ಬಂಧನವಾದಂತಾಗಿದೆ.
ಇದನ್ನೂ ಓದಿ:Bandipur: ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ವ್ಯಾಘ್ರನನ್ನೇ ಅಟ್ಟಾಡಿಸಿದ ಗಜರಾಜ…
ಬಂಧಿತರನ್ನು ಪಾಟ್ನಾದ ಮನೀಶ್ ಕುಮಾರ್ ಹಾಗೂ ಅಶುತೋಷ್ ಎಂದು ಗುರುತಿಸಲಾಗಿದೆ. ಸಿಬಿಐ ಮೂಲಗಳ ಪ್ರಕಾರ, ಮನೀಶ್ ಕುಮಾರ್ ವಿದ್ಯಾರ್ಥಿಗಳನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದು, ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ನೀಡಿರುವುದಾಗಿ ಶಂಕಿಸಲಾಗಿದೆ.
ಅಶುತೋಷ್ ತನ್ನ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದಾಗಿ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಂಕಿತ ಇಬ್ಬರನ್ನು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ವಿಚಾರಣೆ ನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆರು ಎಫ್ ಐಆರ್ ಗಳನ್ನು ದಾಖಲಿಸಿದೆ. NEET-UG ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ ಘೋಷಿಸಿದ್ದ ನಂತರ ಈ ಬೆಳವಣಿಗೆ ನಡೆದಿತ್ತು.
ಮೇ 5ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ 2024ರ ನೀಟ್ -ಯುಜಿ ಪರೀಕ್ಷೆಯನ್ನು ನಡೆಸಿದ್ದು, ಸುಮಾರು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್ 4ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸುಮಾರು 1,500 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದು ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದ್ದು, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.