Advertisement

CBI Investigation: ಸಿಎಂ, ನಾಗೇಂದ್ರ ವಿರುದ್ಧ ಸಿಬಿಐ ತನಿಖೆ: ಬಿಜೆಪಿ ಪಟ್ಟು

10:19 PM Jun 02, 2024 | Team Udayavani |

ಬೆಂಗಳೂರು: ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರೀ ಅವ್ಯವಹಾರವಾಗಿದೆ. ಅಂತಾರಾಜ್ಯ ಮಟ್ಟದಲ್ಲಿ ನೂರಾರು ಕೋಟಿ ರೂ.ಗಳ ಭ್ರಷ್ಟಾಚಾರವಾಗಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಸ್‌ಟಿ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಬಿಐ ತನಿಖೆಯನ್ನು ಎದುರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

Advertisement

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಸಿಎಂ ಸಿದ್ದರಾಮಯ್ಯ ಅವರಿಗೆ ಘನತೆ, ಗೌರವ, ನೈತಿಕತೆ ಇದ್ದರೆ ಮೊದಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಇರುವ ವಾಲ್ಮೀಕಿ ಅಭಿವೃದ್ಧಿ ನಿಗಮವು ಸಿದ್ದರಾಮಯ್ಯ ಸಿಎಂ ಆದ ಬಳಿಕ ವ್ಯಾಪಾರ ಮಾಡುವ ನಿಗಮವಾಗಿ ಪರಿವರ್ತನೆಯಾಗಿದೆ. ನಿಗಮದ ಮೂಲಕ ಅರ್ಹ ಫ‌ಲಾನುಭವಿಗಳ ಕಲ್ಯಾಣ ಆಗಬೇಕೇ ಹೊರತು, ಐಟಿ ಕಂಪೆನಿಗಳದ್ದಲ್ಲ. ಈ ನಿಗಮವು 15 ಕಂಪೆನಿಗಳಿಗೆ ಹಣ ಕೊಟ್ಟಿದೆ. ಆ ಕಂಪೆನಿಗಳು ಯಾವುವು? ಟ್ರಾಕ್‌ ರೆಕಾರ್ಡ್‌ ಏನು? ಅವರಿಗೆ ಯಾಕೆ ಹಣ ಕೊಟ್ಟಿದ್ದೀರಿ? ಬ್ಯಾಂಕ್‌ ಆಫ್‌ ಬರೋಡದಿಂದ 144 ಕೋಟಿ ರೂ. ಓವರ್‌ ಡ್ರಾಫ್ಟ್… (ಸಾಲ) ಪಡೆದಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆಗೆ ಇದನ್ನು ಪಡೆಯಲಾಯಿತೇ? ಆ ಕಂಪೆನಿಗಳಿಗೆ ಚುನಾವಣೆ ವೇಳೆ ಯಾಕೆ ಹಣ ಹಾಕಿದ್ದೀರಿ? ಆ ಕಂಪೆನಿಗಳ ಮಾಲಕರು ಯಾರು? ಆ ಕಂಪೆನಿಗಳು ಮತ್ತು ಡಿ.ಕೆ.ಶಿವಕುಮಾರ್‌, ನಾಗೇಂದ್ರ ಮತ್ತು ಸಿದ್ದರಾಮಯ್ಯ ಅವರಿಗೆ ಏನು ಸಂಬಂಧ ಎಂದು ಪ್ರಶ್ನಿಸಿದರು.

ಓವರ್‌ ಡ್ರಾಫ್ಟ್… ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿಲ್ಲವೇಕೆ? ಇದರಲ್ಲಿ ನಾಗೇಂದ್ರ ಮಾತ್ರವಲ್ಲದೆ ಅನೇಕ ಅಧಿಕಾರಿಗಳಿದ್ದಾರೆ. ತೆಲಂಗಾಣದಲ್ಲಿ ಚುನಾವಣೆಗೆ ನಿಂತ ಅನೇಕ ಅಭ್ಯರ್ಥಿಗಳೂ ಇದರಲ್ಲಿದ್ದಾರೆ. ಹಣ ಕೊಟ್ಟ ಅನೇಕ ಮಂತ್ರಿಗಳೂ ಕರ್ನಾಟಕದಲ್ಲಿದ್ದಾರೆ. ಇದೊಂದು ಅಂತಾರಾಜ್ಯ ಭ್ರಷ್ಟಾಚಾರ. ಆದ್ದರಿಂದ ಸಿಬಿಐ ತನಿಖೆ ನಡೆಸಬೇಕಿದೆ ಎಂದು ಪ್ರತಿಪಾದಿಸಿದರು.

ಸಿಬಿಐ ತನಿಖೆಗೆ ಶ್ರೀರಾಮುಲು ಆಗ್ರಹ
ಮಾಜಿ ಡಿಸಿಎಂ ಬಿ.ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ದೊಡ್ಡ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸಚಿವ ನಾಗೇಂದ್ರ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಯಲಿದೆ. ಇದು ಎಸ್ಸಿ, ಎಸ್ಟಿ ಜನಾಂಗದ ಹಣ. ಈ ಸಚಿವರು ಮೀಸಲು ಕ್ಷೇತ್ರದಿಂದ ಗೆದ್ದವರು. ಅವರ ಜವಾಬ್ದಾರಿ ಏನು? ಈಗ ಸಿಎಂ ಮೇಲೆ ಕೂಡ ಅನುಮಾನ ಬರುವಂತಾಗಿದೆ. ಹೀಗಾಗಿ ಎಲ್ಲ ನಿಗಮಗಳಲ್ಲೂ ಪರಿಶೀಲನೆ ನಡೆಸಬೇಕಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next