ಮುಂಬಯಿ: ಮುಂಬಯಿ ಮಾಜಿ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಆರೋಪಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಹಾಗೂ ಇತರರ ವಿರುದ್ಧ ಸಿಬಿಐ ಶನಿವಾರ (ಏಪ್ರಿಲ್ 24) ಎಫ್ ಐಆರ್ ದಾಖಲಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಆಸ್ಪತ್ರೆಗಳಿಗೆ ಹೋಗುವ ಜನರನ್ನು ಉಚಿತವಾಗಿ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದ ರಿಕ್ಷಾವಾಲ
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕೂಡಾ ನಡೆಸಿತ್ತು. ಮುಂಬಯಿನ ಮಾಜಿ ಪೊಲೀಸ್ ಕಮಿಷನರ್ ಪರಂ ಬೀರ್ ಸಿಂಗ್ ಆರೋಪಿಸಿದ ಭ್ರಷ್ಟಾಚಾರದ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿದ ನಂತರ ದೇಶ್ ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಒಂದು ವೇಳೆ ಈ ಪ್ರಕರಣದಲ್ಲಿ ಆರೋಪ ಸಾಬೀತುಪಡಿಸುವ ಸಾಕ್ಷ್ಯ ಕಂಡುಬಂದಲ್ಲಿ ಎಫ್ ಐಆರ್ ದಾಖಲಿಸುವಂತೆ ಸಿಬಿಐಗೆ ಕೋರ್ಟ್ ನಿರ್ದೇಶನ ನೀಡಿತ್ತು. ಪ್ರಕರಣದ ಬಗ್ಗೆ ಬಾಂಬೆ ಹೈಕೋರ್ಟ್ ಏ.5ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ದೇಶ್ ಮುಖ್ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ದೇಶ್ ಮುಖ್ ಭ್ರಷ್ಟಾಚಾರದಲ್ಲಿ ತೊಡಗಿರುವುದಾಗಿ ಪರಂ ಬೀರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಆರೋಪಿಸಿದ್ದು, ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಪ್ರತಿ ತಿಂಗಳು ನೂರು ಕೋಟಿ ರೂಪಾಯಿ ಸಂಗ್ರಹಿಸುವಂತೆ ಸೂಚಿಸಿದ್ದರು ಎಂದು ದೂರಿದ್ದರು.