ಹೊಸದಿಲ್ಲಿ : ಮಾಂಸ ರಫ್ತು ಉದ್ಯಮಿ ಮೊಯಿನ್ ಕುರೇಶಿ ಯನ್ನು ಒಳಗೊಂಡಿರುವ ಭ್ರಷ್ಟಾಚಾರದ ಕೇಸಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸಿಬಿಐ ಇಂದು ಸೋಮವಾರ ತನ್ನದೇ ಇಲಾಖೆಯ ಡಿಎಸ್‌ಪಿ ದೇವೀಂದರ್ ಕುಮಾರ್ ಅವರನ್ನು ಬಂಧಿಸುವ ಇನ್ನೊಂದು ಅಭೂತಪೂರ್ವ ಕ್ರಮ ತೆಗೆದುಕೊಂಡಿತು.
ಮೊಯಿನ್ ಕುರೇಶಿ ಕೇಸಿನ ಸಾಕ್ಷಿದಾರ ಸತೀಶ್ ಸನಾ ಅವರ ಹೇಳಿಕೆಯನ್ನು ಸೃಷ್ಟಿಸಿದ ಆರೋಪ ದೇವೀಂದರ್ ಕುಮಾರ್ ಅವರ ಮೇಲಿದೆ.
ದಾಖಲೆಗಳ ಪ್ರಕಾರ ಸತೀಶ್ ಸನಾ ಅವರ ಹೇಳಿಕೆಯನ್ನು 2018ರ ಸೆ.26ರಂದು ದಿಲ್ಲಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಆದರೆ ತನಿಖೆಯಿಂದ ಗೊತ್ತಾಗಿರುವ ಪ್ರಕಾರ ಸನಾ ಅವರು ಅಂದು ದಿಲ್ಲಿಯಲ್ಲಿ ಇರಲಿಲ್ಲ; ಬದಲಾಗಿ ಅವರು ಹೈದರಾಬಾದ್‌ನಲ್ಲಿ ಇದ್ದರು.
ಸನಾ ಅವರು ನಿಜಕ್ಕೂ ತನಿಖೆಯನ್ನು ಸೇರಿಕೊಂಡದ್ದು ದಿಲ್ಲಿಯಲ್ಲಿ ಅಕ್ಟೋಬರ್ 1ರಂದು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಸಿಬಿಐ ನಿರ್ದೇಶಕ ಆಲೋಕ್ ಕುಮಾರ್ ವರ್ಮಾ ವಿರುದ್ಧ ಕೇಂದ್ರದ ಜಾಗೃತ ಆಯೋಗಕ್ಕೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ (ಈಗ ಬಂಧಿತರಾಗಿದ್ದಾರೆ) ಮಾಡಿದ್ದ ಆರೋಪಗಳನ್ನು ಸಾಬೀತು ಪಡಿಸುವ ಸಲುವಾಗಿ ದೇವೀಂದರ್ ಅವರು ಸನಾ ಹೇಳಿಕೆಯನ್ನು ಸೃಷ್ಟಿಸಿದ್ದರು ಎಂದು ಸಿಬಿಐ ಹೇಳಿದೆ.
ಈ ಹಿನ್ನೆಲೆಯಲ್ಲೀಗ ಸಿಬಿಐ, ಮೊಯಿನ್ ಕುರೇಶಿ ಕೇಸಿನ ಉಸ್ತುವಾರಿ ನಡೆಸುತ್ತಿದ್ದ ಆಗಿನ ಎಸ್‌ಐಟಿ, ಸಿಬಿಐ ನ ಇತರ ಅಧಿಕಾರಿಗಳ ಪಾತ್ರದ ಬಗ್ಗೆ ಈಗಿನ್ನು ತನಿಖೆ ನಡೆಯಲಿದೆ ಎಂದು ಸಿಬಿಐ ಹೇಳಿದೆ.