Advertisement

ಬ್ಯಾಂಕ್‌ ಮೋಸಗಾರರಿಗೆ ಸಿಬಿಐ ದಾಳಿ ಬಿಸಿ

10:07 AM Jul 04, 2019 | Team Udayavani |

ನವದೆಹಲಿ: ದೇಶದ ನಾನಾ ಬ್ಯಾಂಕುಗಳಿಗೆ ವಿವಿಧ ಕಂಪನಿಗಳು, ಉದ್ಯಮಿಗಳು ಮಾಡಿರುವ ಮೋಸದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮಂಗಳವಾರ, ಕರ್ನಾಟಕದ ಕೋಲಾರ ಸೇರಿದಂತೆ ವಿವಿಧ ರಾಜ್ಯಗಳ 18 ನಗರಗಳ ಸುಮಾರು 61 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ.

Advertisement

ಒಟ್ಟಾರೆ 640 ಕೋಟಿ ರೂ. ವಂಚನೆ ನಡೆಸಿದ 14 ಪ್ರಕರಣಗಳೊಂದಿಗೆ ದಾಳಿ ಆರಂಭಿಸಿದ ಸಿಬಿಐ, ದಿನಾಂತ್ಯದ ಹೊತ್ತಿಗೆ ಮತ್ತೆ ಮೂರು ಹೊಸ ಪ್ರಕರಣಗಳನ್ನು ದಾಖಲಿಸಿದ್ದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 17ಕ್ಕೇರಿತಲ್ಲದೆ, ಎಲ್ಲಾ ಪ್ರಕರಣಗಳ ವಂಚನೆಯ ಮೊತ್ತ ಕೂಡ 1,139 ಕೋಟಿ ರೂ.ಗಳಿಗೆ ಹೆಚ್ಚಳವಾಯಿತು.

300 ಅಧಿಕಾರಿಗಳಿಂದ ಕಾರ್ಯಾಚರಣೆ: ದೇಶದ ನಾನಾ ರಾಜ್ಯಗಳಲ್ಲಿನ ಸಿಬಿಐ ಶಾಖೆಗಳಿಂದ ಸುಮಾರು 300 ಅಧಿಕಾರಿಗಳನ್ನು ಸೇರಿಸಿದ ಸಂಸ್ಥೆಯ ನಿರ್ದೇಶಕ ರಿಷಿ ಕುಮಾರ್‌ ಶುಕ್ಲಾ, ಅವರೆಲ್ಲರನ್ನೂ ವಿವಿಧ ತಂಡಗಳನ್ನಾಗಿ ವಿಂಗಡಿಸಿ, ಕೋಲಾರ, ದೆಹಲಿ, ಮುಂಬೈ, ಲೂಧಿಯಾನ, ಥಾಣೆ, ವಲ್ಸದ್‌, ಪುಣೆ, ಪಲಾನಿ, ಗಯಾ, ಗುರುಗ್ರಾಮ, ಚಂಡೀಗಡ, ಭೋಪಾಲ್, ಸೂರತ್‌ ಮುಂತಾದ ನಗರಗಳಿಗೆ ಕಳುಹಿಸಿದ್ದರು. ಎಲ್ಲಾ ದಾಳಿಗಳ ಮೇಲ್ವಿಚಾರಣೆಯನ್ನು ಅವರೇ ಖುದ್ದಾಗಿ ವಹಿಸಿಕೊಂಡಿದ್ದರು.

ಬೆಂಗಳೂರಿನ ಕಂಪನಿಗೂ ಬಿಸಿ: ಪ್ರಕರಣದಲ್ಲಿ ಆರೋಪಿಗಳಾಗಿರುವ ವಿವಿಧ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು, ಪ್ರವರ್ತಕರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳಿಗಾಗಿ ಕೂಲಂಕಶ ಹುಡುಕಾಟ ನಡೆಸಿದರು. ದಾಳಿಗೊಳಗಾದ ನಿವಾಸ, ಕಚೇರಿಗಳಲ್ಲಿ ಬೆಂಗಳೂರು ಮೂಲದ ಏಗಾನ್‌ ಬ್ಯಾಟರೀಸ್‌ (98.75 ಕೋಟಿ ರೂ.-ಎಸ್‌ಬಿಐ), ಲೂಧಿಯಾನ ಮೂಲದ ಸುಪ್ರೀಂ ಟೆಕ್ಸ್‌ ಮಾರ್ಟ್‌(ಭಾರತೀಯ ಸ್ಟೇಟ್ ಬ್ಯಾಂಕ್‌ಗೆ 143.25 ಕೋಟಿ ರೂ. ವಂಚನೆ), ಗಯಾ ಮೂಲದ ರಾಮನಂದಿ ಹೋಟೆಲ್ಸ್ ಆ್ಯಂಡ್‌ ರೆಸಾರ್ಟ್ಸ್ ಲಿಮಿಟೆಡ್‌ (131.79 ಕೋಟಿ ರೂ.- ಸೆಂಟ್ರಲ್ ಬ್ಯಾಂಕ್‌ ಆಫ್ ಇಂಡಿಯಾ), ನೋಯ್ಡಾ ಮೂಲದ ನಫ್ತೋಗಜ್‌ ಇಂಡಿಯಾ ಪ್ರೈ. ಲಿಮಿಟೆಡ್‌ (93 ಕೋಟಿ ರೂ.- ಕಾರ್ಪೊರೇಷನ್‌ ಬ್ಯಾಂಕ್‌) ಪ್ರಮುಖವಾದವು.

ಮಳೆಯನ್ನೂ ಲೆಕ್ಕಿಸದೆ ದಾಳಿ: ಮುಂಬೈನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ವಜ್ರ ವ್ಯಾಪಾರಿ ಜತಿನ್‌ ಮೆಹ್ತಾಗೆ ಸೇರಿದ ಆಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಎಕ್ಸಿಮ್‌ ಬ್ಯಾಂಕಿಗೆ 200 ಕೋಟಿ ರೂ. ಸೇರಿದಂತೆ ವಿವಿಧ ಬ್ಯಾಂಕುಗಳಿಗೆ ಒಟ್ಟು 6,500 ಕೋಟಿ ರೂ. ವಂಚಿಸಿರುವ ಪ್ರಕರಣ ಅವರ ಮೇಲಿದೆ. ಇನ್ನು, ವಾಣಿಜ್ಯ ನಗರಿಯಲ್ಲಿ ಇನ್ನೂ ಎರಡು ಕಂಪನಿಗಳಿಗೆ ಸೇರಿದ 5 ಕಡೆ ದಾಳಿ ನಡೆಸಲಾಯಿತು.

Advertisement

ಮೂರು ಹೊಸ ಪ್ರಕರಣ ಸೇರ್ಪಡೆ: ವಿವಿಧೆಡೆ ನಡೆಸಿದ ದಾಳಿಯ ವೇಳೆ, ಕೆಲವು ವ್ಯಕ್ತಿಗಳು, ಕೆಲವು ಬ್ಯಾಂಕುಗಳಿಂದ ಅಕ್ರಮವಾಗಿ ಮನೆ ಸಾಲವನ್ನೂ ಪಡೆದಿರುವುದು ಬೆಳಕಿಗೆ ಬಂದಿದೆ. ಜತೆಗೆ, ಈ ಸಾಲ ನೀಡುವಿಕೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದ್ದು, ಆ ಸಂಬಂಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಜತೆಗೆ, ನಿಯಮಗಳ ಮೀರಿ ಸಾಲ ಕೊಟ್ಟಿರುವ ಬ್ಯಾಂಕ್‌ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

110 ಕೋಟಿಯ ಆಸ್ತಿ ಜಪ್ತಿ

ದೇಶದ ಅತಿದೊಡ್ಡ ಸಕ್ಕರೆ ಕಾರ್ಖಾನೆಯಾದ ಸಿಂಭೋಲಿ ಶುಗರ್ಸ್‌ ಲಿ.ಗೆ ಸೇರಿದ 110 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಮುಟ್ಟುಗೋಲು ಹಾಕಿಕೊಂಡಿದೆ. ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

•ದಿನದ ತಪಾಸಣೆಗಳ ವೇಳೆ ಮತ್ತೆ ಮೂರು ಪ್ರಕರಣಗಳ ಸೇರ್ಪಡೆ
•ಒಟ್ಟು ಮೋಸದ ಮೊತ್ತ 1,139 ಕೋಟಿ ರೂ.ಗಳಿಗೆ ಏರಿಕೆ
•14 ಪ್ರಕರಣಗಳ 18 ನಗರಗಳಲ್ಲಿ ಸಿಬಿಐ ದಾಳಿ
Advertisement

Udayavani is now on Telegram. Click here to join our channel and stay updated with the latest news.

Next