ಹೊಸದಿಲ್ಲಿ : ಸಿಬಿಐ ಅಧಿಕಾರಿಗಳು ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್ ನ ಕೊಚ್ಚಿ ಮೂಲದ ಚೀಫ್ ಇಂಜಿನಿಯರ್ ಮತ್ತು ಇತರ ಐವರನ್ನು ಬಂಧಿಸಿ ಅವರು ಸಂಗ್ರಹಿಸಿದ್ದ 1.21 ಕೋಟಿ ರೂ. ಲಂಚದ ಹಣವನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೊಚ್ಚಿಯ ಎಂಇಎಸ್ ನಲ್ಲಿ ನೌಕಾ ಪಡೆ ಕಾಮಗಾರಿಗಳ ಚೀಫ್ ಇಂಜಿನಿಯರ್ ಆಗಿ ನಿಯೋಜಿತರಾಗಿದ್ದ ರಾಕೇಶ್ ಕುಮಾರ್ ಗರ್ಗ್ ಅವರ ಮನೆ ಸೇರಿದಂತೆ ಸುಮಾರು 20 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ನಿನ್ನೆ ಭಾನುವಾರದಿಂದಲೇ ಆರಂಭವಾಗಿದ್ದ ದಾಳಿ ಕಾರ್ಯಾಚರಣೆಯನ್ನು ದಿಲ್ಲಿ, ಕೊಚ್ಚಿ, ಅಜ್‌ಮೇರ್ ಮತ್ತು ಕೋಲ್ಕತ ಸಹಿತ ಹಲವು ಪ್ರಮುಖ ನಗರಗಳಲ್ಲಿ ಕೈಗೊಳ್ಳಲಾಗಿತ್ತು.
ಈ ಶೋಧ ಕಾರ್ಯಾಚರಣೆಯಲ್ಲಿ 3.97 ಕೋಟಿ ರೂ. ಹೆಚ್ಚುವರಿ ಹಣ, ಆರು ಕಿಲೋಗ್ರಾಂ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.
ಕೊಚ್ಚಿಯ ನೇವಲ್ ಬೇಸ್‌ನಲ್ಲಿ ವಿವಿಧ ಪೌರ ಗುತ್ತಿಗೆ ಗಳನ್ನು ನೀಡುವುದಕ್ಕೆ ಗುತ್ತಿಗೆದಾರರಿಂದ ಗುತ್ತಿಗೆ ಮೊತ್ತದ ಶೇ.1ರಷ್ಟು ಹಣವನ್ನು ಗರ್ಗ್ ಅವರು ಲಂಚದ ರೂಪದಲ್ಲಿ ಸಂಗ್ರಹಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದುದನ್ನು ಅನುಸರಿಸಿ ಈ ಶೋಧ ಕಾರ್ಯಾಚರಣೆಗಳನ್ನು ನಡಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.