Advertisement

ಮೋಸ್ಟ್‌ ವಾಂಟೆಡ್‌ ಸ್ಯಾಮ್‌ ಪೀಟರ್‌ ಬಂಧನಕ್ಕೆ ಸಿಬಿಐ ಶ್ಲಾಘನೆ

10:54 PM Dec 31, 2019 | Lakshmi GovindaRaj |

ಮಂಗಳೂರು: ಸಿಬಿಐ ಮತ್ತು ಇಂಟರ್‌ ಪೋಲ್‌ ತನಿಖಾ ಸಂಸ್ಥೆಗೆ ಬೇಕಿದ್ದ ಮೋಸ್ಟ್‌ ವಾಂಟೆಡ್‌ ಆರೋಪಿ ಸ್ಯಾಮ್‌ ಪೀಟರ್‌ನನ್ನು ಬಂಧಿಸಿದ ಮಂಗಳೂರು ಪೊಲೀಸರ ಕಾರ್ಯಕ್ಕೆ ಸಿಬಿಐ ಶ್ಲಾಘಿಸಿದೆ. ಈ ಬಗ್ಗೆ ಗಾಝಿಯಾಬಾದ್‌ನ ಸಿಬಿಐ ಶಾಖಾ ಮುಖ್ಯಸ್ಥ ಹಾಗೂ ಪೊಲೀಸ್‌ ಅಧೀಕ್ಷಕ ಎ.ರಘುರಾಮರಾಜನ್‌ ಮಂಗಳೂರಿನ ಕದ್ರಿ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಎಸ್‌.ವಿ.ಮಾರುತಿ ಅವರಿಗೆ ಪ್ರಶಂಸನಾ ಪತ್ರ ಕಳುಹಿಸಿದ್ದಾರೆ.

Advertisement

ಬಂಧಿತನಾಗಿದ್ದ: ಆರೋಪಿ ಸ್ಯಾಮ್‌ ಪೀಟರ್‌ ತಾನು ಎನ್‌ಸಿಐಬಿ ಡೈರೆಕ್ಟರ್‌ ಎಂದು ಹೇಳಿಕೊಂಡು ಮಂಗಳೂರಿನಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದಾಗ ಕಳೆದ ಆ.16 ರಂದು ಈತನ 7 ಮಂದಿ ಸಹಚರರ ಜತೆ ಕದ್ರಿ ಠಾಣೆ ಮತ್ತು ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಆರೋಪಿಗಳಿಂದ 20 ಲಕ್ಷ ರೂ. ಮೌಲ್ಯದ 2 ಕಾರು, ಒಂದು ಪಿಸ್ತೂಲು ಮತ್ತು ಒಂದು ರಿವಾಲ್ವರ್‌, 8 ಮದ್ದುಗುಂಡು, ಇತರೆ ಸ್ವತ್ತು ವಶಪಡಿಸಿಕೊಳ್ಳಲಾಗಿತ್ತು.

ಸ್ಯಾಮ್‌ಪೀಟರ್‌ ಮೇಲೆ 8 ರಾಜ್ಯಗಳಲ್ಲಿ 14 ವಿವಿಧ ಪ್ರಕರಣ ದಾಖಲಾಗಿವೆ. ಸ್ಯಾಮ್‌ ಪೀಟರ್‌ನ ಹುಟ್ಟು ಹೆಸರು (ಬರ್ತ್‌ ನೇಮ್‌) ಆಂಟನಿ ಎಂದಿದ್ದರೂ ಮೋಸ ಮಾಡುವ ಉದ್ದೇಶದಿಂದ ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಂಡಿದ್ದ. ಕರ್ನಾಟಕದ ಕೊಡಗಿನಲ್ಲಿದ್ದಾಗ ರಾಹುಲ್‌ ಪೀಟರ್‌, ಮಹಾರಾಷ್ಟ್ರದಲ್ಲಿ ಸ್ಯಾಮ್‌ ಪೀಟರ್‌, ಉತ್ತರ ಪ್ರದೇಶದಲ್ಲಿ ರಾಜೇಶ್‌ ರಾಬಿನ್‌ ಸನ್‌,

ಇದೇ ರೀತಿ ಬೇರೆ ಬೇರೆ ಕಡೆ ರೀತು ರಿಚಾರ್ಡ್‌, ರಾಯ್‌ ಜೇಕಬ್‌, ರಾಬಿನ್‌ ರಿಚರ್ಡ್‌ ಸನ್‌, ರಿಚಾರ್ಡ್‌ ರಾಬಿನ್‌ ಸನ್‌ ಎಂಬ ಹೆಸರನ್ನು ಇಟ್ಟುಕೊಂಡು ಜನರನ್ನು ವಂಚಿಸುತ್ತಿದ್ದ ಎನ್ನುವುದನ್ನು ಮಂಗಳೂರಿನ ಪೊಲೀಸರು ಬೆಳಕಿಗೆ ತಂದಿದ್ದಾರೆ. ಪೊಲೀಸರ ಈ ಸಾಧನೆ ಶ್ಲಾಘನೀಯ ಎಂದು ಡಿ.23ರಂದು ಸಿಬಿಐ ಮುಖ್ಯಸ್ಥರು ಪ್ರಶಂಸಾ ಪತ್ರದಲ್ಲಿ ವಿವರಿಸಿದ್ದಾರೆ. ಅಲ್ಲದೇ, ಅಪರಾಧ ಪತ್ತೆಗೆ ಸಂಬಂಧಿಸಿದ ಇಂತಹ ಕಾರ್ಯ ಮುಂದುವರಿಯಲಿ ಎಂದು ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next