ಸಂತೆಮರಹಳ್ಳಿ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿವ ನೀರಿಗೆ ಯಾವುದೇ ಸಮಸ್ಯೆಯಾಗಬಾರದು ಮತ್ತು ಅಂತರ್ಜಲ ಹೆಚ್ಚಿಸುವ ಸಲುವಾಗಿ ಕಬಿನಿ ಜಲಾಶಯದಿಂದ ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರು ಕಾವೇರಿ ನದಿ ಸೇರುತ್ತಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಸಂತೆಮರಹಳ್ಳಿ ಗ್ರಾಮ ಸೇರಿದಂತೆ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳು, ಯಳಂದೂರು ತಾಲೂಕಿನ ಕಬಿನಿ ಬಲದಂಡೆ ನಾಲೆಗಳಿಗೆ ತಾತ್ಕಾಲಿಕವಾಗಿ ಹೊಸ ನಿಯಮದ ಪ್ರಕಾರ 10 ದಿನಗಳ ಕಾಲ ಕಬಿನಿ ಡ್ಯಾಂನಿಂದ ನೀರು ಬಿಡಲಾಗಿದೆ.
ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿವ ನೀರು ಒದಗಿಸುವುದು, ಅಂತರ್ಜಲ ವೃದ್ಧಿಗೆ ಅನುಕೂಲ ವಾಗುವ ಉದ್ದೇಶದಿಂದ ನೀರು ಹರಿಸಲಾಗುತ್ತಿದೆ. ಇದು ಈ ಭಾಗದ ಕೃಷಿಕರಲ್ಲಿ ಮಂದಹಾಸ ಮೂಡಿಸಿತ್ತು. ಆದರೆ, ನೀರು ಮಾತ್ರ ಕೆರೆ ಕಟ್ಟೆಗಳಿಗೆ ಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ.
ನಾಲೆಯಲ್ಲಿ ಹರಿಯುವ ನೀರು ಹೆಚ್ಚಿನ ಪ್ರಮಾಣದಲ್ಲಿ ಮುಳ್ಳೂರಿನ ಸಮೀಪದಲ್ಲಿರುವ ಕಾವೇರಿ ನದಿಗೆ ಸೇರುತ್ತಿದೆ ಎಂದು ಇರಸವಾಡಿ ಗ್ರಾಮದ ರೈತ ಮಹಾದೇವಶೆಟ್ಟಿ, ನಂಜುಂಡಸ್ವಾಮಿ ಆರೋಪಿಸಿದ್ದಾರೆ.
ಇಳುವರಿ ಹೆಚ್ಚಿಸಿಕೊಳ್ಳಲು ನೆರವು: ಚಾಮರಾ ಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ಅಚ್ಚುಕಟ್ಟು ಪ್ರದೇಶದ ಹತ್ತಾರು ಕೆರೆಗಳು ಇದರ ವ್ಯಾಪ್ತಿಗೆ ಒಳಪಡುತ್ತದೆ. ಈ ಭಾಗದ ರೈತರು ಹೆಚ್ಚಾಗಿ ಮುಸುಕಿನ ಜೋಳ, ರಾಗಿ, ದ್ವಿದಳ ಧಾನ್ಯ ಹಾಗೂ ಕಬ್ಬು ಬೆಳೆದಿದ್ದಾರೆ. ಇಳುವರಿ ಹೆಚ್ಚಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಕಬಿನಿ ಬಲದಂಡೆ ನಾಲೆಯಲ್ಲಿ ನೀರು ಬಿಡಲಾಗಿದೆ.
ಸಂತೆಮರಹಳ್ಳಿ, ಯಳಂದೂರು ಮೂಲಕ ಕೊಳ್ಳೇಗಾಲ ತಾಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುತ್ತದೆ. ಆದರೆ, ಈ ನೀರು ಕರೆ ಕಟ್ಟೆಗಳಿಗೆ ಸೇರದೆ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಕೆರೆಗಳಿಗೆ ನೀರೇ ಹೋಗುತ್ತಿಲ್ಲ: ಕಬಿನಿ ನಾಲೆಯ ಅಚ್ಚುಕಟ್ಟು ವ್ಯಾಪ್ತಿಗೆ ಒಳಪಡುವ ಅನೇಕ ಕೆರೆಗಳಲ್ಲಿ ಹೂಳು ತುಂಬಿದೆ. ನೀರು ಸಂಗ್ರಹಕ್ಕೆ ನಿರ್ಮಾಣವಾಗಿರುವ ಕಾಲುವೆಗಳು ದುರಸ್ತಿಯಲ್ಲಿದೆ. ಇದು ನೀರು ಸಂಗ್ರಹಕ್ಕೆ ಅಡ್ಡಿಯಾಗಿದೆ. ಅನೇಕ ಕಡೆಗಳಲ್ಲಿ ನಾಲೆಯ ತೂಬುಗಳು ದುರಸ್ತಿಯಾ ಗಬೇಕಿದೆ. ಅನೇಕ ಕಡೆ ನೀರು ವ್ಯರ್ಥವಾಗಿ ನದಿ ಸೇರಿ ತಮಿಳುನಾಡಿನ ಜನತೆಗೆ ಅನುಕೂಲವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನರಿಗೆ ಅನುಕೂಲ ಕಲ್ಪಿಸುವತ್ತ ಗಮನ ಹರಿಸಬೇಕಾಗಿದೆ.