ಬೆಂಗಳೂರು/ ಚೆನ್ನೈ: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ ಗುರುವಾರ ನಡೆದ ತಮಿಳುನಾಡು ಬಂದ್‌ಗೆ ಪ್ರತಿಯಾಗಿ ಕನ್ನಡಪರ ಸಂಘಟನೆಗಳು ತಮಿಳುನಾಡು ವಿರುದ್ಧ ಏ. 12ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ತಮಿಳುನಾಡು ಬಂದ್ ವಿರೋಧಿಸಿ ಗುರುವಾರ ಅತ್ತಿಬೆಲೆಯ ಗಡಿ ಭಾಗದಲ್ಲಿ ಬಂದ್ ನಡೆಸಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದು, ಏ.12 ರಂದು ಕರ್ನಾಟಕ ಬಂದ್ ನಡೆಸುವ ಮೂಲಕ ತಮಿಳುನಾಡಿಗೆ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಘೋಷಿಸಿದರು. ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು ಏ.12ರ ಬಂದ್‌ಗೆ ಬೆಂಬಲ ನೀಡಬೇಕು. ಆ ಮೂಲಕ ಕರ್ನಾಟಕದ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್, ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಲಿದೆ. ಆದ್ದರಿಂದ ತಮಿಳುನಾಡಿನ ಬೇಡಿಕೆಗೆ ವಿರುದ್ಧವಾಗಿ ಏ.12ರಂದು ಕರ್ನಾಟಕ ಬಂದ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ವಸ್ತುಸ್ಥಿತಿಯ ಬಗ್ಗೆ ಮನವರಿಕೆ ಮಾಡಲಿದ್ದೇವೆ ಎಂದು ಹೇಳಿದರು.
ಅಲ್ಲದೇ, ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರು ತ್ತಿ ರುವ ತಮಿಳುನಾಡಿನ ಮುಖ್ಯಮಂತ್ರಿ ಸೇರಿ ಸಚಿವರು, ಶಾಸಕರು, ಸಂಸತ್ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತ ಪ ಡಿ ಸಿ ದರು. ಜತೆಗೆ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಏ.9ರಂದು ವಿಚಾರಣೆಗೆ ಬರಲಿದ್ದು, ಈ ವೇಳೆ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ನ್ಯಾಯಪಪೀಠಕ್ಕೆ ಮನವರಿಕೆ ಮಾಡಿಕೊಡುವ ಮಹತ್ತರ ಜವಾಬ್ದಾರಿ ರಾಜ್ಯದ ವಕೀಲರ ಮೇಲಿದೆ ಎಂದರು.
ಸಾ.ರಾ.ಗೋವಿಂದು ಮಾತನಾಡಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಲಭ್ಯವಿರುತ್ತದೋ, ಇಲ್ಲವೋ ಎಂಬುದನ್ನು ಪರಿಗಣಿಸದೆ ಕಾವೇರಿ ನ್ಯಾಯಾಧಿಕರಣ ಪ್ರತಿ ತಿಂಗಳು ಇಂತಿಷ್ಟು ನೀರನ್ನು ತಮಿಳುನಾಡಿಗೆ ಬಿಡಬೇಕು ಎಂದು ಆದೇಶಿಸಿದ್ದು, ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ಇಂತಹ ಪರಿಸ್ಥಿತಿಯಲ್ಲಿ ನಿರ್ವಹಣಾ ಮಂಡಳಿ ರಚನೆಯಾದರೆ ಜಲಾಶಯಗಳ ಮೇಲಿನ ಹಕ್ಕನ್ನು ಕರ್ನಾಟಕ ಕಳೆದುಕೊಳ್ಳುತ್ತದೆ. ರಾಜ್ಯಕ್ಕೆ ಕುಡಿಯುವ ನೀರು ಇಲ್ಲದೇ ಇದ್ದರೂ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲೇ ಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮಂಡಳಿ ರಚಿಸಬೇಕೆಂಬ ತಮಿಳುನಾಡು ಒತ್ತಡಕ್ಕೆ ಕೇಂದ್ರ ಮಣಿಯಬಾರದು. ಒಂದೊಮ್ಮೆ ಮಂಡಳಿ ರಚಿಸಿದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ: ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದಲ್ಲಿ ಪ್ರತಿ ಪಕ್ಷಗಳು ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಸ್ತೆ,ರೈಲು ತಡೆ, ಪ್ರತಿಭಟನಾಕಾರರ ಧರಣಿ, ರ್ಯಾಲಿಗಳಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ರಾಜ್ಯ ಸರ್ಕಾರಿ ಸ್ವಾಮ್ಯದ ಬಸ್‌ಗಳು ಎಂದಿನಂತೆ ಸಂಚರಿಸಿದವಾದರೂ, ಪ್ರತಿಪಕ್ಷಗಳ ಬೆಂಬಲಿತ ಕಾರ್ಮಿಕ ಒಕ್ಕೂಟಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ ಕಾರಣ ಸಾರಿಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು.
ಅತ್ತಿಬೆಲೆ ಗಡಿ ಬಂದ್
ಈ ಮಧ್ಯೆ ತಮಿಳುನಾಡಿನಲ್ಲಿ ಪ್ರತಿಪಕ್ಷ ಡಿಎಂಕೆ ಸೇರಿದಂತೆ ವಿವಿಧ ಸಂಘಟನೆಗಳು ಆಚರಿಸಿದ ಬಂದ್‌ಗೆ ಪ್ರತಿಯಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಕರ್ನಾಟಕ-ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ಗಡಿ ಬಂದ್ ಮಾಡಿದರು.
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ತೀರ್ಪಿನಂತೆ ನಡೆದುಕೊಳ್ಳಬೇಕು. ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಈ ಹಿಂದೆ ಕಾವೇರಿ ನ್ಯಾಯ ಮಂಡಳಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಹೇಳಿತ್ತು. ಆದರೆ, ಸುಪ್ರೀಂಕೋರ್ಟ್ ಸ್ಕೀಂ ಮಾಡುವಂತೆ ಹೇಳಿದೆ. ಸ್ಕೀಂ ಎಂದರೆ ನಿರ್ವಹಣಾ ಮಂಡಳಿ ರಚನೆ ಮಾಡುವುದಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ