Advertisement
ಶುಕ್ರವಾರ ಕಾವೇರಿ ಪ್ರಕರಣ ಸಂಬಂಧ ವಿಚಾರಣೆ ನಡೆಯುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೂ, ನ್ಯಾ. ಗವಾಯಿ ಅವರ ಪೀಠ, ಸಮಯ ಮಾಡಿಕೊಂಡು ವಿಚಾರಣೆ ನಡೆಸಿದರು. ಈ ವೇಳೆ ತಮಿಳುನಾಡು ಪರ ವಕೀಲರು, 24 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಅರಿಕೆ ಮಾಡಿಕೊಂಡರು. ಆದರೆ, ಕರ್ನಾಟಕದ ಪರ ವಾದಿಸಿದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಅವರು, ಸದ್ಯದ ಮಟ್ಟಿಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂದರು.
Related Articles
ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಉಭಯ ರಾಜ್ಯಗಳಿಗೆ ಮೇಕೆದಾಟು ಯೋಜನೆಯೊಂದೇ ಪರಿಹಾರವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಾಧಿಕಾರದ ಮುಂದೆ ನಾವು ಪ್ರಸ್ತಾಪ ಮಾಡುತ್ತೇವೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
Advertisement
“ಮೇಕೆದಾಟು ಸಮಾನಾಂತರ ಜಲಾಶಯವಿದ್ದಿದ್ದರೆ ನಾವು ನೀರು ಶೇಖರಣೆ ಮಾಡಿಕೊಳ್ಳಬಹುದಾಗಿತ್ತು. ಈ ಆಣೆಕಟ್ಟಿನಿಂದ ನಾವು ನೀರು ಬಳಸಿಕೊಳ್ಳಲು ಆಗುವುದಿಲ್ಲ. ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡಲು ಅನುಕೂಲವಾಗುತ್ತದೆ. ಈ ವಿಚಾರದ ಬಗ್ಗೆ ತಮಿಳುನಾಡಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ’ ಎಂದರು.
ಪ್ರಾಧಿಕಾರದ ಮುಂದೆ 24 ಸಾವಿರ ಕ್ಯೂಸೆಕ್ ನೀರು ಬಿಡಲು ತಮಿಳುನಾಡು ಪಟ್ಟು ಹಿಡಿದಿತ್ತು. ನಾವು 3 ಸಾವಿರ ಕ್ಯೂಸೆಕ್ ನೀರು ಬಿಡುವುದಾಗಿ ಹೇಳಿದೆವು. ಅಂತಿಮವಾಗಿ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ದೇಶಿಸಿದೆ. ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅಧ್ಯಯನ ಮಾಡಲಿ ಎಂದು ಮನವಿ ಮಾಡಿದ್ದೇವೆ. ನಮಗೆ ಕುಡಿಯುವುದಕ್ಕೆ ನೀರಿಲ್ಲ. ಹೀಗಾಗಿ ತಮಿಳುನಾಡಿನವರು ಸ್ವಲ್ಪ ಮೃದುಧೋರಣೆ ತಾಳಬೇಕು. ಕಳೆದ ವರ್ಷ ಅವರು ನಿಗದಿಗಿಂತ ಹೆಚ್ಚು ನೀರು ಬಳಕೆ ಮಾಡಿದ್ದರು. ಕಳೆದ ವರ್ಷ ಅವರು ಶೇ. 80 ರಷ್ಟು ಹೆಚ್ಚುವರು ನೀರು ಬಳಸಿದ್ದಾರೆ. ಅವರ ನೀರನ್ನು ಅವರು ಯಾವ ಕಾರಣಕ್ಕೆ ಬಳಸುತ್ತಾರೆ ಎಂದು ನಾವು ಪ್ರಶ್ನಿಸುವುದಿಲ್ಲ. ಸಂಕಷ್ಟದ ಸಮಯದಲ್ಲಿ ಅವರು ಸಮಯೋಚಿತವಾಗಿ ನೀರು ಬಳಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ ರಾಜಕೀಯದಲ್ಲಿ ಅವರ ನಿರ್ಧಾರವನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಅವರಿಗೆ ವಾಸ್ತವಾಂಶ ಗೊತ್ತಿದೆ. ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದರು. ಆದರೂ ಮಾತನಾಡುತ್ತಿದ್ದಾರೆ. ಅವರನ್ನು ಕರೆದು ಸಭೆ ಮಾಡಿ ಚರ್ಚೆ ಮಾಡಿದ್ದೇವೆ. ಸಭೆಯಲ್ಲಿ ಏನು ಚರ್ಚೆ ಮಾಡಿದ್ದೇವೆ ಎಂದು ಹೇಳುವುದಿಲ್ಲ. ನಾವಿಬ್ಬರೂ ಸೇರಿ ರಾಜ್ಯದ ಹಿತ ಕಾಯೋಣ. ಸರ್ವಪಕ್ಷ ನಿಯೋಗ ಭೇಟಿಗೆ ದಿನಾಂಕ ಕೇಳುತ್ತೇವೆ ಎಂದು ತಿಳಿಸಿದರು.
ಬಾರುಕೋಲು ಚಳವಳಿ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದ್ದನ್ನು ಖಂಡಿಸಿ ಮಂಡ್ಯ ಜಿಲ್ಲೆಯಾದ್ಯಂತ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸರ್ಕಾರವನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಶ್ರೀರಂಗಪಟ್ಟಣದಲ್ಲಿ ರೈತಮುಖಂಡರು ಬಾರು ಕೋಲು ಚಳವಳಿ ನಡೆಸಿದರು. ಕಾವೇರಿ ನೀರಿನ ವಿಷಯದಲ್ಲಿ ತಮಿಳುನಾಡಿಗೆ ಇರುವ ಬದ್ದತೆ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿದರು. ಇದೇ ವೇಳೆ, ಕೆಆರ್‌ಎಸ್‌ನಲ್ಲಿಯೂ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಶುಕ್ರವಾರ ನಾಲ್ಕನೇ ದಿನಕ್ಕೆ ಪ್ರವೇಶ ಪಡೆದಿದೆ. ಮೈಸೂರು ಮತ್ತು ಕೊಡಗು ಜಿಲ್ಲೆಯ ರೈತರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.