ಹೊಸದಿಲ್ಲಿ: ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಆಗಬೇಕು. ಅದನ್ನು ತಾನೇ ರಚಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದ್ದು, ರಾಜ್ಯಕ್ಕೆ ಭಾರೀ ಹಿನ್ನಡೆಯಾಗಿದೆ.
ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಜಲ ವಿವಾದದ ಮೇಲ್ಮನವಿ ಅರ್ಜಿ
ವಿಚಾರಣೆಯನ್ನು ಅಂತಿಮಗೊಳಿಸಿ ತೀರ್ಪು ಕಾಯ್ದಿರಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
‘ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಈಗಾಗಲೇ ನರ್ಮದಾ, ಕೃಷ್ಣಾ ಜಲ ನಿರ್ವಹಣಾ ಮಂಡಳಿ ರಚನೆ ಆಗಿದೆ. ಅದರಂತೆಯೇ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಅಂತಿಮ ತೀರ್ಪಿನಲ್ಲಿ ಮಂಡಳಿ ಸ್ವರೂಪ ಹೇಗಿರಬೇಕು ಎನ್ನುವುದನ್ನು ತಿಳಿಸುತ್ತೇವೆ’ ಎಂದು ತ್ರಿಸದಸ್ಯ ಪೀಠ ರಾಜ್ಯದ ವಕೀಲರುಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿದೆ.
2 ವಾರಗಳ ಒಳಗೆ ಲಿಖಿತ ದಾಖಲೆಗಳನ್ನು ಸಲ್ಲಿಸಲು ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿ ರಾಜ್ಯಗಳಿಗೆ ಸೂಚನೆ ನೀಡಿದೆ.
ಕಾವೇರಿ ನ್ಯಾಯಾಧಿಕರಣ ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ವಾದ ಮಂಡಿಸಿದ್ದು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಧಿಕಾರ ನ್ಯಾಯಾಲಯಕ್ಕಿಲ್ಲ ಎಂದು ಹೇಳಿತ್ತು.
ಕೇಂದ್ರ ಸರ್ಕಾರದ ಪರ ವಕೀಲ ರಂಜಿತ್‌ಕುಮಾರ್ ಅವರು, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವುದು ಕೇವಲ ಸಂಸತ್‌ನ ಅಧಿಕಾರ. ಜತೆಗೆ, ಇದಕ್ಕೆ ತಿದ್ದುಪಡಿ ಮಾಡುವುದು ಸಂಸತ್‌ಗೆ ಬಿಟ್ಟ ಅಧಿಕಾರ. ಈಗಾಗಲೇ ಕರಡು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ರಂಜಿತ್‌ಕುಮಾರ್ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಕೇಂದ್ರ ಸರ್ಕಾರ ಕೋರ್ಟ್‌ನ ಆದೇಶ ಪಾಲಿಸಲೇ ಬೇಕು ಎಂದಿದ್ದರು.