Advertisement

ರೈತರ ಬೆಳೆ ಸ್ವಾತಂತ್ರ್ಯ ಕಸಿಯುತ್ತಾ ಪ್ರಾಧಿಕಾರ?

06:00 AM Jun 03, 2018 | Team Udayavani |

ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕಾವೇರಿ ಕಣಿವೆ ಪ್ರದೇಶದ ರೈತರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಲಿದೆ ಎಂಬ ಆತಂಕ ಮಾರ್ದನಿಸುತ್ತಿದೆ. ಕಾವೇರಿ, ಕಬಿನಿ, ಹೇಮಾವತಿ ನದಿ ನೀರು ಇದೀಗ ಪ್ರಾಧಿಕಾರದ ವಶವಾಗಿರುವು ದಿಂದ ಬೆಳೆಗಳಿಗೆ, ಕುಡಿಯಲು ಹಂಚಿಕೆಯಾಗಿರುವಷ್ಟು ನೀರಿನ ಪ್ರಮಾಣಕ್ಕಿಂತ ಒಂದಿಷ್ಟು ನೀರನ್ನು ಹೆಚ್ಚು ಬಳಸಲು ಸಾಧ್ಯವಾಗದಂತಹ ಕಠೊರ ಪರಿಸ್ಥಿತಿ ರೈತರಿಗೆ ಎದುರಾಗುವುದು ನಿಶ್ಚಿತ.

Advertisement

ಪ್ರಸಕ್ತ ಮುಂಗಾರು ಆರಂಭದಿಂದಲೇ ನೀರು ಹಂಚಿಕೆ ಪ್ರಕ್ರಿಯೆ ಶುರುವಾಗಲಿದ್ದು, ಎಲ್ಲಾ ಜಲಾಶಯಗಳಲ್ಲಿರುವ ನೀರಿನ ಮಟ್ಟ, ಜಲಾಶಯಗಳಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣ, ಹೊರಹೋಗುವ ನೀರಿನ ಲೆಕ್ಕದ ಮೇಲೆ ಪ್ರಾಧಿಕಾರ ಇದೀಗ ಕಣ್ಣಿಟ್ಟಿದೆ. ಆ ಲೆಕ್ಕದ ಆಧಾರದ ಮೇಲೆ ತಿಂಗಳಿಗೆ ಎಷ್ಟು ನೀರು ಹರಿಸಬೇಕೋ ಅದನ್ನು ದಿನದ ಲೆಕ್ಕದಲ್ಲಿ ಬಿಡುಗಡೆ ಮಾಡಲು ಶುರು ಮಾಡಲಿದೆ.

ಬೆಳೆ ಸ್ವಾತಂತ್ರ್ಯವಿಲ್ಲ:
ಇನ್ನು ಮುಂದೆ ರೈತರು ತಮಗಿಷ್ಟ ಬಂದ ಬೆಳೆ ಬೆಳೆಯುವಂತಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಇಷ್ಟಾನುಸಾರ ಬೆಳೆ ಬೆಳೆಯುವ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಭತ್ತದ ಬೆಳೆಗೆ 7.67 ಲಕ್ಷ ಎಕರೆ ಪ್ರದೇಶವನ್ನು ಕಾವೇರಿ ಜಲಾನಯನ ಪ್ರದೇಶದಲ್ಲಿ ತೋರಿಸಿದ್ದರೆ, 40 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಷ್ಟೇ ಅವಕಾಶವಿದೆ. ಅರೆ ನೀರಾವರಿ ಪ್ರದೇಶದಲ್ಲಿ 7.15 ಲಕ್ಷ ಎಕರೆ, ಬೇಸಿಗೆ ಬೆಳೆ ಅರೆ ನೀರಾವರಿ ಪ್ರದೇಶ 3.62 ಲಕ್ಷ ಎಕರೆ ಸೇರಿ 18.85 ಲಕ್ಷ ಎಕರೆ ಪ್ರದೇಶವನ್ನು ನಮೂದಿಸಿದ್ದರೂ, ಪ್ರಸ್ತುತ 32 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಕಡಿವಾಣ ಹಾಕಿ 18.85 ಲಕ್ಷ ಎಕರೆ ಪ್ರದೇಶಕ್ಕೆ ಬೆಳೆ ಸೀಮಿತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಕುಡಿಯುವ ನೀರಿಗೂ ಕೊಕ್ಕೆ
ನ್ಯಾಯಾಧಿಕರಣ ಕುಡಿಯುವ ನೀರಿಗೆ ಕೇವಲ 3 ಟಿಎಂಸಿಯಷ್ಟು ನೀರನ್ನು ಮೀಸಲಿಟ್ಟಿದೆ. ಆದರೆ, ನಮಗೆ ಅಗತ್ಯವಿರುವ ನೀರಿನ ಪ್ರಮಾಣ 43.78 ಟಿಎಂಸಿ. ಮೈಸೂರು ಜಿಲ್ಲೆಗೆ ವಾರ್ಷಿಕ 4.76 ಟಿಎಂಸಿ, ಮಂಡ್ಯ ಜಿಲ್ಲೆಗೆ 6.35 ಟಿಎಂಸಿ, ರಾಮನಗರ ಜಿಲ್ಲೆಗೆ 3.2 ಟಿಎಂಸಿ, ಚಾಮರಾಜನಗರ ಜಿಲ್ಲೆಗೆ 5.07 ಟಿಎಂಸಿ, ಹಾಸನ ಜಿಲ್ಲೆಗೆ 3.8 ಟಿಎಂಸಿ ಹಾಗೂ ಬೆಂಗಳೂರು ನಗರಕ್ಕೆ ವಾರ್ಷಿಕ 20.63 ಟಿಎಂಸಿ ನೀರಿನ ಅಗತ್ಯವಿದೆ. 
ಹೀಗಾಗಿ, ಈ ಭಾಗದ ರೈತರು ಮುಂದಿನ ದಿನಗಳಲ್ಲಿ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗಬಹುದು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆಗಳಿಲ್ಲ. ಸುಪ್ರೀಂಕೋರ್ಟ್‌ನ ಆದೇಶವನ್ನು ಯಾವುದಾದರೂ ಸ್ವಾಯತ್ತ ಸಂಸ್ಥೆ ಅನುಷ್ಠಾನಗೊಳಿಸಬೇಕಾಗುತ್ತದೆ. ಅದರಂತೆ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಒಂದೊಮ್ಮೆ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ಬೆಳವಣಿಗೆ ನಡೆದರೆ ಅದನ್ನು ಪ್ರಶ್ನಿಸಲು ಅವಕಾಶವಿದೆ. ಜತೆಗೆ ರಾಜ್ಯದ ಪ್ರತಿನಿಧಿಗಳು ಸಹ ಪ್ರಾಧಿಕಾರದಲ್ಲಿರುತ್ತಾರೆ. ತಮಿಳುನಾಡಿಗೆ ಹಂಚಿಕೆಯಾದ ಪಾಲಿನ ನೀರು ಹರಿಸಿದರೆ ನಂತರ ಯಾವ ಪ್ರಾಧಿಕಾರವೂ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಲು ಅವಕಾಶವಿರುವುದಿಲ್ಲ.
– ಮಧುಸೂಧನ ನಾಯಕ್‌, ಮಾಜಿ ಅಡ್ವೋಕೇಟ್‌ ಜನರಲ್‌

Advertisement

ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಿಂದ ರಾಜ್ಯಕ್ಕೆ ಸ್ವಲ್ಪ ಹಿನ್ನಡೆಯಾಗುವ ಸಂಭವವಿದೆ. ರಾಜ್ಯ ಸರ್ಕಾರದ ಅಧೀನದಲ್ಲಿದ್ದರೆ ಪರಿಸ್ಥಿತಿಗೆ ಅನುಗುಣವಾಗಿ ನೀರು ಹರಿಸಲು ಅನುಕೂಲವಾಗುತ್ತಿತ್ತು. ಒಂದೊಮ್ಮೆ ಕಾಲಮಿತಿಯೊಳಗೆ ನಿಗದಿತ ಪ್ರಮಾಣದ ನೀರು ಹರಿಸಲು ಸಾಧ್ಯವಾಗದಿದ್ದರೆ ಅದನ್ನು ಇನ್ನೊಂದು ಅವಧಿಯಲ್ಲಿ ಹರಿಸಿ ಸಮತೋಲನ ಕಾಯ್ದುಕೊಳ್ಳಲು ಅವಕಾಶವಿರುತ್ತಿತ್ತು. ಉತ್ತಮ ಮಳೆಯಾಗದ ಸಂದರ್ಭದಲ್ಲೂ ನಿಗದಿತ ಪ್ರಮಾಣದ ನೀರು ಹರಿಸಬೇಕು ಎಂದು ಸೂಚಿಸಿದರೆ ತೊಂದರೆಯಾಗಲಿದೆ. ಇದರಿಂದ ರೈತರು, ಜನರ ಹಿತ ಕಾಪಾಡುವುದು ಕಷ್ಟಕರವಾಗಬಹುದು.
– ಅಶೋಕ್‌ ಹಾರ್ನಳ್ಳಿ, ಮಾಜಿ ಅಡ್ವೋಕೇಟ್‌ ಜನರಲ್‌

ಕೇಂದ್ರ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಿರುವುದು ಅಮ್ಮಾ ಸರ್ಕಾರ ಮತ್ತು ರಾಜ್ಯದ ರೈತರಿಗೆ ಸಂದ ಅತಿದೊಡ್ಡ ಜಯ. ತಮಿಳುನಾಡು ಮತ್ತು ರೈತರ ಹಕ್ಕು ಮತ್ತೆ ಸಿಕ್ಕಿದಂತಾಯಿತು.
– ಕೆ. ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ
 

Advertisement

Udayavani is now on Telegram. Click here to join our channel and stay updated with the latest news.

Next